ಬೆಂಗಳೂರು ಡಿ.19: ದೇಶಾದ್ಯಂತ ಸಂಘರ್ಷ, ವಾಕ್ಸಮರಕ್ಕೆ ಕಾರಣವಾಗಿರುವ ಪೌರತ್ವ ಕಾಯಿದೆಯ ಕಿಚ್ಚು ಬೆಂಗಳೂರು ಸೇರಿ ರಾಜ್ಯದಲ್ಲೂ ಹೊತ್ತಿಕೊಂಡಿದೆ. ಪರ ಮತ್ತು ವಿರುದ್ಧದ ಧ್ವನಿಗಳು ಜೋರಾಗುತ್ತಿದ್ದಂತೆಯೇ ಎಲ್ಲ ಪ್ರತಿಭಟನೆಗಳನ್ನು ನಿರ್ಬಂಧಿಸುವ ನಿಟ್ಟಿನಲ್ಲಿ ರಾಜ್ಯ ರಾಜಧಾನಿ ಸೇರಿ ರಾಜ್ಯಾದ್ಯಂತ ಡಿಸೆಂಬರ್ 21ರ ಮಧ್ಯರಾತ್ರಿವರೆಗೆ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
ಇಷ್ಟಾದರೂ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ಇಂದು ಎಡಪಕ್ಷಗಳು ಹಾಗೂ ಮುಸ್ಲಿಂ ಸಮುದಾಯ ನಗರದ ಟೌನ್‌ಹಾಲ್ ಬಳಿ ಪ್ರತಿಭಟನೆಗೆ ಕರೆನೀಡಿತ್ತು.ಈ ಹಿನ್ನೆಲೆ ಬೆಂಗಳೂರಿನಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.ನಿಷೇಧಾಜ್ಞೆ ಹೊರತಾಗಿಯೂ ಪ್ರತಿಭಟನೆ ನಡೆಯುತ್ತಿದ್ದರಿಂದ 55ಕ್ಕೂ ಹೆಚ್ಚು ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ನಗರದ ಟೌನ್ ಹಾಲ್, ಸ್ವಾತಂತ್ರ್ಯ ಉದ್ಯಾನ, ಮೈಸೂರು ಬ್ಯಾಂಕ್ ವೃತ್ತ ಸೇರಿದಂತೆ ಪ್ರತಿಭಟನೆ ಸಂಭವನೀಯ ಸ್ಥಳಗಳಲ್ಲಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ಅಹಿತಕರ ಘಟನೆಗಳು ಜರುಗದಂತೆ ಮುಂಜಾಗ್ರತಾ ಕ್ರಮವಾಗಿ ನಗರ ಸಶಸ್ತ್ರ ಮೀಸಲು ಪಡೆ ತುಕಡಿಗಳನ್ನು ನಿಯೋಜಿಸಲಾಗಿದೆ. ಶಾಂತಿ ಕದಡುವ ಪ್ರಚೋದನಕಾರಿ ಕೆಲಸಗಳಲ್ಲಿ ತೊಡಗಿಸಿಕೊಳ್ಳದಂತೆ ಪೊಲೀಸರು ಮನವಿ ಮಾಡಿದ್ದಾರೆ. ಇನ್ನೊಂದೆಡೆ, ಬೆಂಗಳೂರು ಸೇರಿ ರಾಜ್ಯದ ಕಾನೂನು ಸುವ್ಯವಸ್ಥೆ ಬಗ್ಗೆ ಸಿಎಂ ಯಡಿಯೂರಪ್ಪ ಹಿರಿಯ ಪೊಲೀಸ್ ಆಧಿಕಾರಿಗಳ ಜತೆಗೆ ಸಭೆ ನಡೆಸಿ ಮಾಹಿತಿ ಪಡೆದುಕೊಂಡಿದ್ದಾರೆ. ರಾಜ್ಯದ ಕೆಲವೆಡೆ ಇಂದು ಪ್ರತಿಭಟನೆ ಹಿನ್ನೆಲೆ ಸೂಕ್ತ ಭದ್ರತಾ ಕ್ರಮ ವಹಿಸುವಂತೆ ಸಿಎಂ ಸೂಚನೆ ನೀಡಿದ್ದಾರೆ. ಅಹಿತಕರ ಘಟನೆಗಳು ನಡೆಯದಂತೆ ಕಟ್ಟೆಚ್ಚರ ವಹಿಸುವಂತೆ ನಿರ್ದೇಶನ ನೀಡಿದ್ದು ಸೂಕ್ತ ಬಂದೋಬಸ್ತ್ ಒದಗಿಸುವಂತೆ ಸಿಎಂ ಸೂಚನೆ ನೀಡಿದ್ದಾರೆ.