ಬೆಂಗಳೂರು: ರಾಜ್ಯ ಜೀವನೋಪಾಯ ಇಲಾಖೆಯಡಿ ಬರುವ ಸಂಜೀವಿನಿ-ಕೆ.ಎಸ್.ಆರ್.ಎಲ್.ಪಿ.ಎಸ್ ಸಂಸ್ಥೆಯು ತನ್ನ ಪ್ರಚಾರ ರಾಯಭಾರಿಯಾಗಿದ್ದ ದಿವಂಗತ ನಟ ಪುನೀತ್ ರಾಜಕುಮಾರ್ ಸ್ಮರಣಾರ್ಥ ಸಹಸ್ರ ದೀಪಗಳನ್ನು ಬೆಳಗಿಸಿ, `ದೀಪ ನಮನ’ವನ್ನು ಸಲ್ಲಿಸಿತು. ಪುನೀತ್ ಅವರ ಸಮಾಧಿ ಇರುವ ಕಂಠೀರವ ಸ್ಟುಡಿಯೋದಲ್ಲಿ ಶನಿವಾರ ಸಂಜೆ ಈ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ನೆರೆದಿದ್ದ ಸಂಸ್ಥೆಯ ಸಿಬ್ಬಂದಿ ವರ್ಗ ಮತ್ತು ನೂರಾರು ಮಹಿಳಾ ಸ್ವಸಹಾಯ ಸಂಘಗಳ ಸದಸ್ಯೆಯರು, “ಹೋದ ವರ್ಷದ ದೀಪಾವಳಿ ಸಂದರ್ಭದಲ್ಲಿ ನಮ್ಮ ಸಂಸ್ಥೆಯ ಮೂಲಕ ತಯಾರಿಸಿದಂತಹ ಮಣ್ಣಿನ ಹಣತೆಗಳ ವ್ಯಾಪಾರಕ್ಕೆ ದೀಪ ಸಂಜೀವಿನಿ ಎನ್ನುವ ವಿಶಿಷ್ಟ ಉಪಕ್ರಮವನ್ನು ಹಮ್ಮಿಕೊಂಡು, ಎಂಟು ಮಳಿಗೆಗಳನ್ನು ತೆರೆಯಲಾಗಿತ್ತು. ಇದಕ್ಕೆ ಉತ್ತೇಜನ ನೀಡಲು ಮುಂದೆ ಬಂದಿದ್ದ ಪುನೀತ್ ಅವರು ಪ್ರಚಾರ ರಾಯಭಾರಿಯಾಗಿ, ನಮಗೆ ಬೆಂಬಲ ಕೊಟ್ಟಿದ್ದರು’’ ಎಂದು ನೆನಪಿಸಿಕೊಂಡು, ಕಂಬನಿ ಮಿಡಿದರು.
`ಪುನೀತ್ ಅವರು ಅಪಾರ ಸಾಮಾಜಿಕ ಕಳಕಳಿಯನ್ನು ಮೈಗೂಡಿಸಿಕೊಂಡಿದ್ದರಲ್ಲದೆ, ಯುವಜನಾಂಗಕ್ಕೆ ಸ್ಫೂರ್ತಿಯ ಸೆಲೆಯಾಗಿದ್ದರು. ಮಹಿಳೆಯರು ಸ್ವಾವಲಂಬಿಯಾಗುವ ನಿಟ್ಟಿನಲ್ಲಿ ಅವರು ಸದಾ ಮಿಡಿಯುತ್ತಿದ್ದರು. ಆದರೆ ಇದನ್ನೆಲ್ಲ ಅವರು ತೆರೆಯ ಮರೆಯಲ್ಲಿದ್ದುಕೊಂಡು ಮಾಡುತ್ತಿದ್ದರೇ ಹೊರತು ಪ್ರಚಾರವನ್ನು ಬಯಸುತ್ತಿರಲಿಲ್ಲ’ ಎಂದು ಮಹಿಳಾ ಸ್ವಸಹಾಯ ಸಂಘಗಳ ಸದಸ್ಯೆಯರು ಅಭಿಪ್ರಾಯಪಟ್ಟರು.
ನೆರೆದಿದ್ದವರೆಲ್ಲರೂ ಸರದಿ ಸಾಲಿನಲ್ಲಿ ನಿಂತು, ಪುನೀತ್ ಅವರ ಸಮಾಧಿಗೆ ಭಾವಪೂರ್ಣ ನಮನಗಳನ್ನು ಸಲ್ಲಿಸಿದರು.
ಈ ಸಂದರ್ಭದಲ್ಲಿ ಜೀವನೋಪಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಸೆಲ್ವ ಕುಮಾರ್, ಎನ್ ಆರ್ ಎಲ್ ಎಂ ನಿರ್ದೇಶಕಿ ಮಂಜುಶ್ರೀ ಸೇರಿದಂತೆ ಹಲವರು ಉಪಸ್ಥಿತರಿದ್ದರು.