ನವದೆಹಲಿ,ಡಿ.06: 27 ವರ್ಷದ ಪಶುವೈದ್ಯೆಯನ್ನು ಅತ್ಯಾಚಾರ ಮಾಡಿ ಅತ್ಯಂತ ಕ್ರೂರವಾಗಿ ಸುಟ್ಟುಹಾಕಿದ್ದ ನಾಲ್ವರು ಆರೋಪಿಗಳನ್ನು ತೆಲಂಗಾಣ ಪೊಲೀಸರು ಎನ್ ಕೌಂಟರ್ ಮಾಡುವ ಮೂಲಕ ಸಂತ್ರಸ್ತೆಗೆ ನ್ಯಾಯ ಒದಗಿಸಿದ್ದಾರೆ. ಈ ಬಗ್ಗೆ ದೇಶದೆಲ್ಲೆಡೆ ಉತ್ತಮ ಪ್ರತಿಕ್ರಿಯೆ ಲಭ್ಯವಾಗಿದ್ದು, ಪಟಾಕಿ ಸಿಡಿಸಿ, ಸಿಹಿ ಹಂಚಿ ಎಲ್ಲರು ಸಂಭ್ರಮಿಸಿದ್ದಾರೆ. ಸೋಶಿಯಲ್ ಮೀಡಿಯಾ ಸೇರಿದಂತೆ ಎಲ್ಲೆಡೆ ಜನರು ಎನ್‌ಕೌಂಟರ್ ನಡೆಸಿದ ವಿ. ಸಿ,. ಸಜ್ಜನರ್ ನೇತೃತ್ವದ ಪೊಲೀಸ್ ತಂಡಕ್ಕೆ ಅಭಿನಂದನೆ ಸಲ್ಲಿಸಿದ್ದು, ಹೈದರಾಬಾದ್ ಪೊಲೀಸರು ಕಾಣಲು ಸಿಕ್ಕಲ್ಲೆಲ್ಲಾ ಹೂವಿನ ಮಳೆ ಸುರಿಸುತ್ತಿದ್ದಾರೆ.
ಈ ಸಂಭ್ರಮದ ವೇಳೆ 2012ರಲ್ಲಿ ಸಾಮೂಹಿಕ ಅತ್ಯಾಚಾರಕ್ಕೊಳಗಾಗಿದ್ದ ನಿರ್ಭಯಾ ತಾಯಿ ಆಶಾದೇವಿ ಸಹ ಪ್ರತಿಕ್ರಿಯೆ ನೀಡಿದ್ದು ಹರ್ಷ ವ್ಯಕ್ತಪಡಿಸಿದ್ದಾರೆ. ಈ ಶಿಕ್ಷೆಯಿಂದ ನನಗೆ ತುಂಬಾ ಸಂತೋಷವಾಗಿದೆ. ಪೊಲೀಸರು ಉತ್ತಮ ಕೆಲಸ ಮಾಡಿದ್ದಾರೆ ಮತ್ತು ಪೊಲೀಸ್ ಸಿಬ್ಬಂದಿ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳಬಾರದು ಎಂದು ನಾನು ಒತ್ತಾಯಿಸುತ್ತೇನೆ ಎಂದಿದ್ದಾರೆ.
ಇನ್ನು, ನಾನು ಕಳೆದ 7 ವರ್ಷಗಳಿಂದ ನನ್ನ ಮಗಳಿಗೆ ನ್ಯಾಯ ದೊರಕಿಸಿಕೊಡಲು ಒಂದು ಕಡೆಯಿಂದ ಇನ್ನೊಂದು ಕಡೆಗೆ ಸುತ್ತಾಡುತ್ತಿದ್ದೇನೆ. ನಿರ್ಭಯಾ ಅಪರಾಧಿಗಳನ್ನು ಶೀಘ್ರದಲ್ಲೇ ಗಲ್ಲಿಗೇರಿಸಬೇಕು ಎಂದು ನಾನು ಈ ದೇಶದ ಮತ್ತು ಸರಕಾರದ ನ್ಯಾಯ ವ್ಯವಸ್ಥೆಗೆ ಮನವಿ ಮಾಡುತ್ತೇನೆ ಎಂದು ನಿರ್ಭಯಾ ತಾಯಿ ಹೇಳಿದ್ದಾರೆ.