ಬೆಂಗಳೂರು: ಬೆಳಗಾವಿಯಲ್ಲಿರುವ ಮರಾಠಿ ಭಾಷಿಗರು ಕೂಡ ಕರ್ನಾಟಕದವರೇ. ಎಲ್ಲರೂ ಐಕ್ಯತೆಯಿಂದ ಒಟ್ಟಿಗೆ ಹೋಗುವುದು ಮೊದಲ ಕರ್ತವ್ಯವಾಗಬೇಕು. ಕರ್ನಾಟಕದ ಭೂಮಿ, ನಮ್ಮ ಕನ್ನಡ ಭಾಷೆಗೆ ಮೊದಲ ಆದ್ಯತೆ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಕೆಪಿಸಿಸಿ ಕಚೇರಿ ಬಳಿ ಮಾಧ್ಯಮಗಳ ಜೊತೆ ಮಾತನಾಡಿದ ಶಿವಕುಮಾರ್, ಬೆಳಗಾವಿಯಲ್ಲಿ ಎಂಇಎಸ್ ಪುಂಡಾಟಿಕೆ ಹೆಚ್ಚುತ್ತಿದ್ದು, ಕಚೇರಿ ತೆರೆಯಲು ಮಹಾರಾಷ್ಟ್ರ ಸರ್ಕಾರಕ್ಕೆ ಮನವಿ ಮಾಡಿರುವ ಬಗ್ಗೆ ಪ್ರತಿಕ್ರಿಯಿಸಿದರು.
ಬೆಳಗಾವಿಯ ಗ್ರಾಮೀಣ ಭಾಗದ ಜನರಿಗೆ ನಮ್ಮ ಸರ್ಕಾರ ಸಾಕಷ್ಟು ಅನುಕೂಲತೆಗಳನ್ನು ಕಲ್ಪಿಸಿಕೊಟ್ಟಿದೆ. ಅವರು ನಮ್ಮ ನೀರು, ಗಾಳಿ ಕುಡಿಯುತ್ತಿದ್ದಾರೆ. ನಮ್ಮ ಭೂಮಿಯಲ್ಲಿ ವಾಸವಾಗಿದ್ದಾರೆ, ವ್ಯವಸಾಯ ಮಾಡುತ್ತಿದ್ದಾರೆ. ಈ ಬಜೆಟ್ ಅಲ್ಲಿ ಬೆಳಗಾವಿ ಗ್ರಾಮೀಣ ಭಾಗದ ಕೃಷಿ ಭೂಮಿಗಳಿಗೆ ನೀರನ್ನು ಒದಗಿಸಲು ರೂ.900 ಕೋಟಿ ವೆಚ್ಚದಲ್ಲಿ ಯೋಜನೆ ಘೋಷಣೆ ಮಾಡಲಿದ್ದೇವೆ ಎಂದರು.
ಲೋಕಸಭಾ ಚುನಾವಣೆ ವಿಚಾರವಾಗಿ ಕೇಳಿದಾಗ “ಲೋಕಸಭಾ ಅಭ್ಯರ್ಥಿಗಳ ಪಟ್ಟಿಯನ್ನು ಬಹುತೇಕ ಅಂತಿಮ ಹಂತಕ್ಕೆ ತೆಗೆದುಕೊಂಡು ಹೋಗುತ್ತೇವೆ. ಈ ವಿಚಾರವಾಗಿ ನಾನು ಮತ್ತು ಮುಖ್ಯಮಂತ್ರಿಗಳು ಒಂದು ಸುತ್ತಿನ ಮಾತುಕಥೆ ನಡೆಸಿದ್ದೇವೆ. ಈಗ ಎಐಸಿಸಿ ಪ್ರಧಾನ ಕಾರ್ಯದರ್ಶಿಗಳ ಜತೆ ಸಭೆ ಮಾಡುತ್ತೇವೆ, ನಂತರ ಸ್ಕ್ರೀನಿಂಗ್ ಸಮಿತಿ ಸದಸ್ಯರು ಚರ್ಚಿಸಿ ಹೈಕಮಾಂಡಿಗೆ ಪಟ್ಟಿ ಕಳಿಸುತ್ತೇವೆ.” ಎಂದರು.




























































