ಬೆಳಗಾವಿ: ಸದನದಲ್ಲಿ ಮಂಡಿಸಲಾದ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ ವಿಧೇಯಕ, ಯಾವುದೇ ಧರ್ಮದ ವಿರುದ್ಧವಲ್ಲ, ಸಮಾಜದಲ್ಲಿ ಶಾಂತಿ ಹಾಗೂ ಸಾಮರಸ್ಯ ಕಾಪಾಡಿಕೊಳ್ಳಲು ಈ ಕಾಯಿದೆ ಸಹಕಾರಿಯಾಗಲಿದೆ, ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.
ವಿಧಾನ ಸಭೆಯಲ್ಲಿ, ಮಾತನಾಡುತ್ತಾ, ಧಾರ್ಮಿಕ ಸ್ವಾತಂತ್ರ್ಯ ಸಂರಕ್ಷಣಾ ಹಕ್ಕು ವಿಧೇಯಕ ವನ್ನು ಮಂಡಿಸಲಾಗಿದ್ದು, ಸಮಾಜದಲ್ಲಿ ಪಿಡುಗಾಗಿ ಪರಿಣಮಿಸಿರುವ ಬಲವಂತದ ಹಾಗೂ ಆಮಿಷದ ಮತಾಂತರ ಹಾವಳಿಯನ್ನು ತಡೆಯುವ ಅಗತ್ಯವಿದೆ, ಎಂದರು.
ಸ್ವಇಚ್ಛೆಯಿಂದ ಯಾರಾದರೂ ಮತಾಂತರ ವಾದರೆ ಅದಕ್ಕೆ ಯಾರದೂ ಅಸಮ್ಮತಿಯಿಲ್ಲ. ಕಾಯ್ದೆ ಯ ಕುರಿತು, ಯಾರೂ ಭಯ ಪಡಬೇಕಾಗಿಲ್ಲ, ಪ್ರತಿಯೊಂದು ಧರ್ಮದವರ ಅಸ್ಮಿತೆಯನ್ನು ಕಾಪಾಡುವ ನಿಟ್ಟಿನಲ್ಲಿ ಈ ಕಾಯಿದೆಯನ್ನು ತಂದಿದ್ದೇವೆ. ಈ ಕಾಯಿದೆ, ವಾಸ್ತವವಾಗಿ ಹಿಂದಿನ ಕಾಂಗ್ರೆಸ್ ಸರಕಾರದ ಕೂಸು, ಅದನ್ನೇ ಇನ್ನಷ್ಟು ಬಲಗೊಳಿಸಿದ್ದೇವೆ ಇದಕ್ಕೆ ಸದನದ ಸದಸ್ಯರು ಒಪ್ಪಿಗೆ ನೀಡಬೇಕು ಎಂದು, ಸಚಿವರು ಮನವಿ ಮಾಡಿದರು.
ಇಂಥಹ ಮಸೂದೆಗಳು, ರಾಷ್ಟ್ರದ ಇತರ ಎಂಟು ರಾಜ್ಯಗಳಲ್ಲಿ ಈಗಾಗಲೇ ಜಾರಿಯಲ್ಲಿದೆ, ಎಂದೂ ಸಚಿವರು, ತಿಳಿಸಿದರು.