ಮಗನ ಮದ್ವೆ ನಿಗದಿಯಾಗಿತ್ತು..ಆದರೆ ತಂದೆ ಆಸ್ಪತ್ರೆ ಸೇರಿಬಿಟ್ಟಿದ್ದರು..ಅದ್ಧೂರಿ ವೆಚ್ಚದ ಮದ್ವೆಯನ್ನೇ ಬಿಟ್ಟು ತಂದೆಯ ಕಣ್ಣ ಮುಂದೆಯೇ ಆಸ್ಪತ್ರೆಯಲ್ಲೇ ಮಗ ಭಾವೀ ಪತ್ನಿಗೆ ತಾಳಿಕಟ್ಟಿದ್ದ..ಈ ಘಟನೆ ನಡೆದಿದ್ದು ಟೆಕ್ಸಾಸ್ ನಲ್ಲಿ..ಟೆಕ್ಸಾಸ್ ಮೂಲದ ಆಲಿಯಾ ಮತ್ತು ಮೈಕಲ್ ಥಾಂಪ್ಸನ್ ಹೀಗೆ ವಿವಾಹಿತರಾಗಿದ್ದರು.
ಮೈಕೆಲ್ ಥಾಂಪ್ಸನ್ ತಂದೆ ತೀವ್ರ ಅನಾರೋಗ್ಯಕ್ಕೊಳಗಾಗಿ ಆಸ್ಪತ್ರೆಯಿಂದ ಹೊರಗೆ ಬರಲಾರದ ಸ್ಥಿತಿಯಲ್ಲಿದ್ದರು. ಹೀಗಾಗಿ, ಈ ಜೋಡಿ ತಮ್ಮ ಮದುವೆಯ ಬಗ್ಗೆ ಮಾಡಿದ್ದ ಎಲ್ಲಾ ಯೋಜನೆಗಳನ್ನು ಬದಿಗಿಟ್ಟು ವಿವಾಹದ ಸ್ಥಳವನ್ನು ಆಸ್ಪತ್ರೆಗೆ ಬದಲಾಯಿಸಿದ್ದರು. ಯಾವುದೇ ಕಾರಣಕ್ಕೂ ತಂದೆ ನಮ್ಮ ಮದುವೆಯನ್ನು ತಪ್ಪಿಸಿಕೊಳ್ಳಬಾರದು ಎಂದು ನಿರ್ಧರಿಸಿದ ಈ ಜೋಡಿ ಆಸ್ಪತ್ರೆಯಲ್ಲಿ ತಂದೆ ಎದುರೇ ಉಂಗುರ ಬದಲಾಯಿಸಿಕೊಂಡಿದ್ದಾರೆ.
ಇದಕ್ಕಿಂತ ಮೊದಲು ಅದ್ಭುತವಾದ ಚರ್ಚಿನಲ್ಲಿ ಮದುವೆಯಾಗಲು ಇವರಿಬ್ಬರು ನಿರ್ಧರಿಸಿದ್ದರು. ಆದರೆ, ತಂದೆಗಾಗಿ ಎಲ್ಲವನ್ನೂ ಬದಿಗಿರಿಸಿ ಇವರು ಸರಳವಾಗಿ ದಾಂಪತ್ಯಕ್ಕೆ ಕಾಲಿಟ್ಟಿದ್ದಾರೆ. ಅದ್ಧೂರಿ ಮದುವೆ ಡ್ರೆಸ್‌ಗಳನ್ನು ಪಕ್ಕಕ್ಕಿಟ್ಟು ಸರಳವಾಗಿ ಆಸ್ಪತ್ರೆ ಗೌನ್ ತೊಟ್ಟು ಇವರಿಬ್ಬರು ವಿವಾಹವಾಗಿದ್ದಾರೆ. ಇದು ಸರಳ ವಿವಾಹವೇ ಆಗಿರಬಹುದು. ಆದರೆ, ಆಸ್ಪತ್ರೆಯವರು ಇವರ ಹೃದಯ ವೈಶಾಲ್ಯತೆಯನ್ನು ಕೊಂಡಾಡಿದ್ದಾರೆ ಮತ್ತು ನವಜೋಡಿಗೆ ಶುಭ ಹಾರೈಸಿದ್ದಾರೆ.
ನಾವು ಮಾರ್ಚಿನಲ್ಲಿ ಮದುವೆಯಾಗಲು ನಿರ್ಧರಿಸಿದ್ದೆವು. ಆದರೆ, ನಮ್ಮ ಕುಟುಂಬದಲ್ಲಿ ಇಬ್ಬರು ಸಾವನ್ನಪ್ಪಿದ್ದರು. ಇದರಿಂದ ಎಲ್ಲಾ ಬದಲಾಗುತ್ತಾ ಬಂದಿತ್ತು. ಆ ಇಬ್ಬರು ಮೃತಪಟ್ಟ ಬಳಿಕ ತಂದೆ ನಮ್ಮ ಮದುವೆಯಲ್ಲಿ ಹಾಜರಿರುವುದು ಎಷ್ಟು ಅಗತ್ಯ ಎಂಬುದು ನಮಗೆ ಗೊತ್ತಿತ್ತು. ಹೀಗಾಗಿ, ನಾವು ಎಲ್ಲಿ ಮದುವೆಯಾದೆವು ಎಂಬುದು ಮುಖ್ಯವಾಗುವುದಿಲ್ಲ. ಮೈಕಲ್ ತಂದೆ ಮದುವೆಗೆ ಸಾಕ್ಷಿಯಾಗಿದ್ದರು ಎಂಬುದಷ್ಟೇ ಮುಖ್ಯ ಅಂಶ’ ಎಂದು ಮದುಮಗಳು ಆಲಿಯಾ ಖುಷಿಯಿಂದ ಹೇಳಿದ್ದಾರೆ.