ಬೆಂಗಳೂರು,ಡಿ.17: ಇದೇ ಡಿಸೆಂಬರ್ 26 ರಂದು ಕಂಕಣ ಸೂರ್ಯಗ್ರಹಣ ಸಂಭವಿಸಲಿದ್ದು, ದ್ವಾದಶ ರಾಶಿಗಳು ಹಾಗೂ ನಕ್ಷತ್ರಗಳ ಮೇಲೆ ವಿಶೇಷವಾದ ಪ್ರಭಾವ ಉಂಟಾಗುವುದು. ಸೂರ್ಯ ಮತ್ತು ಗ್ರಹಣದ ಕಾರಣಗಳಿಂದಾಗಿ ವೈಯಕ್ತಿಯ ಜೀವನದಲ್ಲೂ ಸಾಕಷ್ಟು ಬದಲಾವಣೆ ಹಾಗೂ ಪ್ರಭಾವ ಉಂಟಾಗುವ ಸಾಧ್ಯತೆಗಳಿವೆ. ಅದರಲ್ಲೂ ಗ್ರಹಣವು ಯಾವ ರಾಶಿ ಮತ್ತು ನಕ್ಷತ್ರಗಳ ಮೇಲೆ ಹಿಡಿದಿದೆ? ಹಾಗೂ ಗ್ರಹಣದ ದುಷ್ಪರಿಣಾಮ ಯಾವ ಗ್ರಹ ಮತ್ತು ನಕ್ಷತ್ರಗಳ ಮೇಲೆ ಉಂಟಾಗುವುದು ಎನ್ನುವುದನ್ನು ಮೊದಲು ಗ್ರಹಿಸಬೇಕು.
ಹಿಂದೂ ಪಂಚಾಂಗಗಳ ಪ್ರಕಾರ ಡಿಸೆಂಬರ್ 26ರಂದು ಕಾಣಿಸಿಕೊಳ್ಳುವ ಗ್ರಹಣವು ಮೂಲಾ, ಮಘಾ, ಅಶ್ವಿನಿ, ಜೇಷ್ಠಾ ಮತ್ತು ಪೂರ್ವಾಷಾಢಾ ನಕ್ಷತ್ರಗಳ ಮೇಲೆ ಹಾಗೂ ಧನುಸ್ಸು, ಮಕರ, ವೃಶ್ಚಿಕ, ವೃಷಭ ಮತ್ತು ಕರ್ಕಾಟಕ ರಾಶಿಗಳ ಮೇಲೆ ಗಮನಾರ್ಹ ಋಣಾತ್ಮಕ ಪ್ರಭಾವ ಬೀರುವುದು..
ಗ್ರಹಣದ ಸಮಯದಲ್ಲಿ ದೇವರನ್ನು ಸ್ಪರ್ಶಿಸುವುದು ಮತ್ತು ಪೂಜಿಸುವುದನ್ನು ನಿಷೇಧಿಸಲಾಗಿದೆ. ಹಾಗಾಗಿ ದೇವಾಲಯದ ಬಾಗಿಲು ಸಹ ಗ್ರಹಣದ ಸಮಯದಲ್ಲಿ ಮುಚ್ಚಲಾಗುವುದು. ಗ್ರಹಣದ ನಂತರ ದೇವರನ್ನು ಶುದ್ಧೀಕರಿಸಿ ಗಂಗಾಜಲದಲ್ಲಿ ತೊಳೆಯಲಾಗುವುದು. ಗ್ರಹಣದ ಸಮಯದಲ್ಲಿ ಜಪ, ಧ್ಯಾನ, ದೇವರ ನಾಮ ಸ್ಮರಣೆ, ದೇವರ ಪ್ರಾರ್ಥನೆ, ಸ್ತುತಿ, ಗೀತೆಗಳನ್ನು ಹಾಡುವುದರಿಂದ ಉಂಟಾಗುವ ಕೆಟ್ಟ ಪರಿಣಾಮಗಳ ಪ್ರಭಾವವನ್ನು ಕಡಿಮೆ ಮಾಡಬಹುದು.
ಗ್ರಹಣದ ಕಾಲದಲ್ಲಿ ಪರಿಸರವು ಸಂಪೂರ್ಣವಾಗಿ ಮಲೀನಗೊಂಡಿರುತ್ತದೆ. ಆ ಸಮಯದಲ್ಲಿ ಊಟ-ತಿಂಡಿಯನ್ನು ಮಾಡಬಾರದು. ಹಾಗೆ ಮಾಡಿದರೆ ಅನಾರೋಗ್ಯ ಕಾಡುವುದು. ಬೇಯಿಸಿದ ಆಹಾರ ಪದಾರ್ಥಗಳಿದ್ದರೆ ಅವುಗಳಿಗೆ ತುಳಸಿ ಎಲೆಯನ್ನು ಹಾಕಿ ಇಡಲಾಗುವುದು. ಅದು ಪವಿತ್ರತೆಯನ್ನು ಕಾಪಾಡುವುದು.
ಗ್ರಹಣದ ಸಮಯದಲ್ಲಿ ನಿದ್ರೆ, ಲೈಂಗಿಕ ಸಂಭೋಗ ಮತ್ತು ಸೌಂದರ್ಯ ವರ್ಧಕಗಳ ಅನ್ವಯವನ್ನು ಸಹ ಮಾಡಬಾರದು. ಅವೆಲ್ಲವೂ ಅಶುಭ ಸೂಚಕವಾಗಿರುತ್ತವೆ. ಗ್ರಹಣ ಮುಗಿದ ನಂತರ ಪವಿತ್ರ ನೀರು ಅಥವಾ ಗಂಗಾ ನೀರಿನಲ್ಲಿ ಸ್ನಾನ ಮಾಡಿ ಶುದ್ಧವಾಗಬೇಕು. ಮತ್ತು ಶುದ್ಧ ಬಟ್ಟೆಯನ್ನು ಧರಿಸಬೇಕು. ಗರ್ಭಿಣಿಯರು ಗ್ರಹಣದ ಸಮಯದಲ್ಲಿ ಮನೆಯಿಂದ ಆಚೆ ಹೋಗಬಾರದು. ಯಾವುದೇ ಆಹಾರವನ್ನು ಸೇವಿಸಬಾರದು. ಅದು ಮಗುವಿನ ಮೇಲೆ ಕೆಟ್ಟ ಪರಿಣಾಮ ಬೀರುವುದು.
ಗ್ರಹಣ ದೋಷಕ್ಕೆ ಒಳಗಾದ ನಕ್ಷತ್ರ ಮತ್ತು ರಾಶಿಯವರು ಈಶ್ವರ ದೇವಸ್ಥಾನಕ್ಕೆ ದೀಪದ ಎಣ್ಣೆಯನ್ನು ನೀಡಬೇಕು. ದೇವಾಲಯಕ್ಕೆ ಭೇಟಿ ನೀಡಿ ಕನಿಷ್ಠ 21 ಪ್ರದಕ್ಷಿಣೆಯನ್ನು ಹಾಕಬೇಕು. ಗ್ರಹಣಕ್ಕೆ ಸಂಬಂಧಿಸಿದ ಧಾನ್ಯಗಳನ್ನು ಬ್ರಾಹ್ಮಣರಿಗೆ ದಾನ ಮಾಡಬೇಕು. ಸೂರ್ಯನಿಗೆ ಸಂಬಂಧಿಸಿದ ಗೋಧಿ ಧಾನ್ಯವನ್ನು ಕೆಂಪು ಬಟ್ಟೆಯಲ್ಲಿ ಸುತ್ತಿ ದಾನ ಮಾಡಬೇಕು.ಕೇತುವಿಗೆ ಸಂಬಂಧಿಸಿದ ಹುರುಳಿ ಧಾನ್ಯವನ್ನು ಚಿತ್ರದಿಂದ ಕೂಡಿರುವ ಬಟ್ಟೆಯಲ್ಲಿ ಸುತ್ತಿ ದಾನ ಮಾಡಬೇಕು.