ಧಾರವಾಡ : ಮಾಜಿ ಸಿಎಂ, ಜೆಡಿಎಸ್ ಅಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಆಪ್ತ ಕೋನ ರೆಡ್ಡಿ ಅವರು ಮಂಗಳವಾರ ಕಾಂಗ್ರೆಸ್ ಸೇರಲಿದ್ದಾರೆ. ಮಾಜಿ ಜೆಡಿಎಸ್ ಶಾಸಕರಾಗಿರುವ ಅವರು, ನಾಳೆ ಬೆಳಗಾವಿಯಲ್ಲಿ ಕಾಂಗ್ರೆಸ್ ಪಕ್ಷ ಸೇರುವುದಾಗಿ ತಿಳಿಸಿದ್ದಾರೆ.
ಈ ಕುರಿತಂತೆ ಮಾಹಿತಿ ಹಂಚಿಕೊಂಡ ಕೋನರೆಡ್ಡಿ, ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ, ಮಾಜಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗುವುದಾಗಿ ತಿಳಿಸಿದರು.
ಹಿಂದೆ ನವಲಗುಂದ ಕ್ಷೇತ್ರವನ್ನು ಪ್ರತಿನಿಧಿಸಿದ್ದ ಕೋನರೆಡ್ಡಿ, ಕ್ಷೇತ್ರದ ಮತದಾರರ ಒಮ್ಮತದಿಂದ ಕಾಂಗ್ರೆಸ್ ಸೇರುತ್ತಿದ್ದೆನೆ. ಕ್ಷೇತ್ರದ ಅಭಿವೃದ್ಧಿ ದೃಷ್ಟಿಯಿಂದ ಪಕ್ಷ ಸೇರುತ್ತಿರುವೆ ಎಂದಿದ್ದಾರೆ.
ಜೆಡಿಎಸ್ ಬಿಟ್ಟು ಕಾಂಗ್ರೆಸ್ ಪಕ್ಷ ಸೇರುವ ಬಗ್ಗೆ ದೇವೆಗೌಡರು ಹಾಗೂ ಕುಮಾರಸ್ವಾಮಿ ಅವರ ಗಮನಕ್ಕೆ ತಂದಿದ್ದೆ. ಅವರು ಜೆಡಿಎಸ್ ಬಿಡದಂತೆ ಹೇಳಿದ್ದರು. ಆದರೆ ಕ್ಷೇತ್ರದ ಜನತೆಯ ಮಾತಿಗೆ ಜೆಡಿಎಸ್ ಪಕ್ಷ ಬಿಟ್ಟು ಕಾಂಗ್ರೆಸ್ ಸೇರುತ್ತಿರುವೆ ಎಂದಿರುವ ಕೋನರೆಡ್ಡಿ, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ, ನವಲಗುಂದ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸುವುದಾಗಿ ತಿಳಿಸಿದರು.
ತಮ್ಮ ಜೊತೆ, ಕ್ಷೇತ್ರದ ಹಲವು ಮುಖಂಡರು ಹಾಗೂ ಕಾರ್ಯಕರ್ತರೂ ಕಾಂಗ್ರೆಸ್ ಸೇರುತ್ತಾರೆ ಎಂದವರು ತಿಳಿಸಿದರು.