ಬೆಂಗಳೂರು: ಸ್ಥಳೀಯ ಸಂಸ್ಥೆ ಚುನಾವಣೆ ಸೇರಿ ಯಾವುದೇ ವಿಷಯಗಳಲ್ಲೂ ಬಿಜೆಪಿ- ಜೆಡಿಎಸ್ ನಡುವೆ ಒಳ ಒಪ್ಪಂದ ಆಗಿಲ್ಲ. ಈ ಬಗ್ಗೆ ಕೇಳಿ ಬರುತ್ತಿರುವ ಮಾತುಗಳು ಆಧಾರ ರಹಿತ ಎಂದು ಉಪ ಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ ಸ್ಪಷ್ಟಪಡಿಸಿದ್ದಾರೆ.
ರಾಮನಗರದಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಅವರು; ಪ್ರತಿಪಕ್ಷಗಳಿಗೆ, ಮುಖ್ಯವಾಗಿ ಕಾಂಗ್ರೆಸ್‌ಗೆ ಒಳ್ಳೆಯದು ಮಾತಾಡಿ ಅಭ್ಯಾಸವಿಲ್ಲ. ಮಂಡ್ಯ, ಮೈಸೂರು, ರಾಮನಗರ ಸೇರಿ ಯಾವುದೇ ಭಾಗದಲ್ಲಿ ಬಿಜೆಪಿ- ಜೆಡಿಎಸ್ ನಡುವೆ ಹೊಂದಾಣಿಕೆ ಇಲ್ಲ ಎಂದರು.
ಎಲ್ಲರಿಗೂ ಗೊತ್ತಿರುವಂತೆ ಜೆಡಿಎಸ್ ನಮಗೆ ವಿರೋಧ ಪಕ್ಷ. ಹಾಗೆ ನೋಡಿದರೆ ಒಳಒಪ್ಪಂದಗಳು ಇರುವುದು ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಮಾತ್ರ. ಈ ಬಗ್ಗೆ ದೂರುವವರು ಅವೆರಡೂ ಪಕ್ಷಗಳ ಬಗ್ಗೆ ಮಾತನಾಡಬೇಕು ಎಂದು ಡಿಸಿಎಂ ಹೇಳಿದರು.
ಮೈಶುಗರ್ ಕಾರ್ಖಾನೆ ಉಳಿಯಬೇಕು:
ಮಂಡ್ಯದಲ್ಲಿ ಮೈಶುಗರ್ ಕಾರ್ಖಾನೆ ಆರಂಭದ ಬಗ್ಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಭೇಟಿಯಾಗಿದ್ದರು. ಇದು ತಪ್ಪೇನೂ ಅಲ್ಲ. ಕಾರ್ಖಾನೆ ಆರಂಭವಾಗಬೇಕು ಎನ್ನುವುದು ಆ ಭಾಗದ ಜನರ ಬಹದಿನಗಳ ಬಯಕೆ. ಆ ನಿಟ್ಟಿನಲ್ಲಿ ಸರಕಾರ ಎಲ್ಲ ಕ್ರಮಗಳನ್ನೂ ಕೈಗೊಳ್ಳಲಿದೆ ಎಂದು ಡಾ.ಅಶ್ವತ್ಥನಾರಾಯಣ ಹೇಳಿದರು.
ಮೈಶುಗರ್ ಕಾರ್ಖಾನೆಯನ್ನು ಖಾಸಗೀಕರಣ ಮಾಡುವುದು ಅನಿವಾರ್ಯ. ಈವರೆಗೆ ಸರಕಾರದ ಉಸ್ತುವಾರಿಯಲ್ಲಿ ಹೇಗೆ ನಡೆದಿದೆ, ಏನೆಲ್ಲ ಅಧ್ವಾನಗಳು ಆಗಿದ್ದವು ಎಂಬುದು ಎಲ್ಲರಿಗೂ ಗೊತ್ತಿದೆ. ಹೀಗಾಗಿ ಖಾಸಗೀಕರಣವೇ ಉತ್ತಮ ಪರಿಹಾರ. ಈ ಕಾರ್ಖಾನೆ ನಮ್ಮ ರಾಜ್ಯದ ಹೆಮ್ಮೆಯ ಸಂಕೇತ. ಅದನ್ನು ಉಳಿಸಿ ಬೆಳಸಬೇಕು ಎಂದು ಡಿಸಿಎಂ ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.