ನವದೆಹಲಿ: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಸೇರಿದಂತೆ ಇತರ ಆರೋಪಿ ಗಳಿಗೆ ನೀಡಿದ್ದ ಜಾಮೀನನ್ನು ರದ್ದುಪಡಿಸುವಂತೆ ರಾಜ್ಯ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಜಾಮೀನು ಯಾಕೆ ರದ್ದುಪಡಿಸಬಾರದು ಎಂಬ ಪ್ರಶ್ನೆಯನ್ನು ದರ್ಶನ್ ಪರ ವಕೀಲರಿಗೆ ಕೇಳಿದೆ. ಅಂತಿಮ ವಿಚಾರಣೆಯನ್ನು ಜುಲೈ 22ಕ್ಕೆ ಮುಂದೂಡಿದೆ.
2024ರ ಜೂನ್ 8ರಂದು ರೇಣುಕಾಸ್ವಾಮಿಯನ್ನು ಅಪಹರಿಸಿ ಕೊಲೆ ಮಾಡಲಾಗಿದೆ ಎಂಬ ಆರೋಪದ ಮೇಲೆ ನಟ ದರ್ಶನ್, ಪವಿತ್ರಾ ಗೌಡ ಸೇರಿದಂತೆ 17 ಮಂದಿಯನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದರು. ಇವರಲ್ಲಿ ಎಂಟು ಮಂದಿಗೆ, ಜಾರಿಗೊಂಡ 6 ತಿಂಗಳ ನ್ಯಾಯಾಂಗ ಬಂಧನದ ನಂತರ, 2024ರ ಡಿಸೆಂಬರ್ 13ರಂದು ಕರ್ನಾಟಕ ಹೈಕೋರ್ಟ್ ಜಾಮೀನು ನೀಡಿತ್ತು. ಈ ಆದೇಶದ ವಿರುದ್ಧ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು.
ಈ ಪ್ರಕರಣ ಕುರಿತು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪಿ.ಎಸ್. ನರಸಿಂಹ ಹಾಗೂ ನ್ಯಾಯಮೂರ್ತಿ ಜೇ.ಬಿ. ಪರ್ಡಿವಾಲಾ ನೇತೃತ್ವದ ಪೀಠ, “ಹೈಕೋರ್ಟ್ ನೀಡಿದ ಜಾಮೀನು ಆದೇಶವನ್ನು ನಾವು ಪರಿಶೀಲಿಸಿದ್ದೇವೆ. ನ್ಯಾಯಾಲಯ ತನ್ನ ವಿವೇಚನೆ ಸರಿಯಾಗಿ ಬಳಸಿಲ್ಲವೇನೋ ಎನ್ನುವ ಅನುಮಾನವಿದೆ,” ಎಂಬ ಅಭಿಪ್ರಾಯ ವ್ಯಕ್ತಪಡಿಸಿತು. ಜಾಮೀನು ಯಾಕೆ ರದ್ದುಪಡಿಸಬಾರದು ಎಂದು ದರ್ಶನ್ ಪರ ವಕೀಲ ಕಪಿಲ್ ಸಿಬಲ್ ಅವರನ್ನು ಈ ಕುರಿತು ಪ್ರಶ್ನಿಸಿತು.
ಈ ಕುರಿತಂತೆ ಕಪಿಲ್ ಸಿಬಲ್ ಅವರು ವಾದ ಮಂಡಿಸಲು ಮುಂದಾದರೂ, ನ್ಯಾಯಪೀಠ, “ನಿಮ್ಮ ವಾದಗಳನ್ನೆಲ್ಲ ಜುಲೈ 22ರಂದು ಕೇಳಿಕೊಳ್ಳುತ್ತೇವೆ,” ಎಂದು ವಿಚಾರಣೆಯನ್ನು ಮುಂದೂಡಿತು.
ಜುಲೈ 22ರಂದು ಈ ಕುರಿತ ಅಂತಿಮ ತೀರ್ಪು ಪ್ರಕಟವಾಗುವ ನಿರೀಕ್ಷೆ ಇದೆ. ಇದರೊಂದಿಗೆ ದರ್ಶನ್, ಪವಿತ್ರಾ ಗೌಡ, ಪ್ರದೂಶ್, ಜಗದೀಶ್, ಲಕ್ಷ್ಮಣ್, ಅನುಕುಮಾರ್ ಹಾಗೂ ನಾಗರಾಜು ಸೇರಿದಂತೆ ಜಾಮೀನಿನಲ್ಲಿರುವ ಏಳು ಮಂದಿಯ ಭವಿಷ್ಯ ನಿರ್ಧಾರವಾಗಲಿದೆ.