ಶಿವಮೊಗ್ಗ: ಜಾತಿ ಜನಗಣತಿ ವಿಚಾರ ಇದೀಗ ರಾಜ್ಯ ರಾಜಕಾರಣದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಜಾತಿ ಜನಗಣತಿ ವರದಿ ಸೋರಿಕೆಯಾಗಿದೆ ಎಂಬ ಆರೋಪವಂತೂ ವಿವಾದದ ಬಿರುಗಾಳಿ ಎಬ್ಬಿಸಿದೆ.
ಈ ನಡುವೆ, ಜಾತಿ ಜನಗಣತಿ ವರದಿ ಸೋರಿಕೆಯಾಗಿಲ್ಲ ಎಂದು ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಎಚ್.ಕಾಂತರಾಜ್ ಸ್ಪಷ್ಟಪಡಿಸಿದ್ದಾರೆ. ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲಾ ಆಯಾಮಗಳಿಂದಲೂ ಜಾತಿ ಜನಗಣತಿ ಸಮೀಕ್ಷೆ ನಡೆಸಲಾಗಿದ್ದು, ವರದಿ ಅವೈಜ್ಞಾನಿಕವಾಗಿದೆ ಎಂಬ ಆರೋಪ ಸರಿಯಲ್ಲ ಎಂದರು.
1931 ರ ನಂತರ ಹಿಂದುಳಿದ ವರ್ಗಗಳ ಸಾಮಾಜಿಕ-ಆರ್ಥಿಕ ಸ್ಥಿತಿಯ ಕುರಿತು ಯಾವುದೇ ಸಮೀಕ್ಷೆಯನ್ನು ನಡೆಸಲಾಗಿಲ್ಲ, ಹೀಗಾಗಿ 2015 ರಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಸಮೀಕ್ಷೆಯನ್ನು ಕೈಗೆತ್ತಿಕೊಳ್ಳಲು ಸಮಿತಿಯನ್ನು ರಚಿಸಿದರು ಎಂದ ಎಚ್.ಕಾಂತರಾಜ್, ಆಯೋಗದ ಶಿಫಾರಸುಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಾರಿಗೆ ತರಲಿದ್ದಾರೆಂಬ ಭರವಸೆಯಿದೆ ಎಂದರು.