ಭೋಪಾಲ್,ಸೆ.13: ಮಧ್ಯಪ್ರದೇಶದ ಖಟ್ಲಾಪುರ ಘಾಟ್ ಬಳಿ ನಡೆದ ದೋಣಿ ದುರಂತ ಎಲ್ಲರನ್ನು ಮೂಕರನ್ನಾಗಿದೆ. ಇಂದು ಬೆಳಗ್ಗೆ ಗಣೇಶ ವಿಸರ್ಜನೆಗಾಗಿ ಖಟ್ಲಾಪುರ ಘಾಟ್ ಬಳಿಯ ಕೆರೆಯಲ್ಲಿ ಗಣೇಶ ವಿಸರ್ಜನೆ ಮಾಡುವ ಸಲುವಾಗಿ 16 ಮಂದಿ ದೋಣಿಯಲ್ಲಿ ತೆರಳಿದ್ದರು. ಆಳವುಳ್ಳ ಪ್ರದೇಶದಲ್ಲಿ ಇದ್ದಕ್ಕಿದ್ದಂತೆ ದೋಣಿ ಪಲ್ಟಿಯಾದ ಪರಿಣಾಮ 16 ಮಂದಿಯೂ ನೀರಿನಲ್ಲಿ ಮುಳುಗಿದರು..ಕೂಡಲೇ ರಕ್ಷಣಾ ಕಾರ್ಯಾಚರಣೆ ತಂಡ, ಮುಳುಗು ತಜ್ಞರು ಹಾಗೂ ರಾಜ್ಯ ವಿಪತ್ತು ನಿರ್ವಹಣಾ ಪಡೆ ಸ್ಥಳಕ್ಕಾಗಮಿಸಿದ ಪರಿಣಾಮ ನೀರಿನಲ್ಲಿ ಮುಳುಗಿದ್ದ 16 ಮಂದಿಯ ಪೈಕಿ ಐವರನ್ನು ರಕ್ಷಿಸಲಾಯ್ತು. 11 ಮಂದಿಯ ಮೃತದೇಹವನ್ನು ಕಾರ್ಯಚರಣೇಯ ಮೂಲಕ ಹೊರತೆಗೆದಿರುವುದಾಗಿ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಅಖಿಲ್ ಪಟೇಲ್ ಹೇಳಿದ್ದಾರೆ.
ದೋಣಿ ದುರಂತದಲ್ಲಿ ಸಾವನ್ನಪ್ಪಿದ ಮೃತರ ಕುಟುಂಬಕ್ಕೆ ಮಧ್ಯಪ್ರದೇಶದ ಸಚಿವ ಪಿ.ಸಿ.ಶರ್ಮಾ 4 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ. ಅಲ್ಲದೆ ಈ ಕುರಿತು ತನಿಖೆ ನಡೆಸಲು ಸಚಿವರು ತಿಳಿಸಿದ್ದಾರೆ.