ಚಿತ್ರದುರ್ಗ: ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಗೊರ್ಲತ್ತು ಗ್ರಾಮದ ಬಳಿ ಗುರುವಾರ ಬೆಳಗಿನ ಜಾವ ಖಾಸಗಿ ಸ್ಲೀಪರ್ ಬಸ್ ಟ್ರಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಭೀಕರ ಅಪಘಾತ ಸಂಭವಿಸಿದೆ. ಬಸ್ ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ. ಅಪಘಾತದಲ್ಲಿ ಕನಿಷ್ಠ 9 ಮಂದಿ ಸಜೀವ ದಹನಗೊಂಡಿದ್ದು, ಹಲವರು ಗಾಯಗೊಂಡಿದ್ದಾರೆ ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ.
ಬೆಂಗಳೂರಿನಿಂದ ಶಿವಮೊಗ್ಗಕ್ಕೆ ತೆರಳುತ್ತಿದ್ದ ಸ್ಲೀಪರ್ ಬಸ್ ರಾಷ್ಟ್ರೀಯ ಹೆದ್ದಾರಿ–48ರಲ್ಲಿ ಅಪಘಾತಕ್ಕೀಡಾಗಿದೆ. ಡಿಕ್ಕಿಯಾದ ತಕ್ಷಣವೇ ಬಸ್‌ಗೆ ಬೆಂಕಿ ಹೊತ್ತಿಕೊಂಡಿದೆ. ಆಗ ಪ್ರಯಾಣಿಕರು ಬಸ್ಸಿನೊಳಗೆ ಸಿಲುಕಿಕೊಂಡಿದ್ದರು. ಕ್ ರಸ್ತೆ ವಿಭಜಕವನ್ನು ದಾಟಿ ಬಸ್‌ಗೆ ಮುಖಾಮುಖಿ ಡಿಕ್ಕಿ ಹೊಡೆದಿದೆ ಎಂದು ವರದಿಯಾಗಿದೆ. ಟ್ರಕ್ ಚಾಲಕ ಕೂಡಾ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಸುದ್ದಿ ತಿಳಿದು, ಪೊಲೀಸ್ ಮಹಾನಿರೀಕ್ಷಕ ಬಿ.ಆರ್. ರವಿಕಾಂತೇ ಗೌಡ, ಚಿತ್ರದುರ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು ಸೇರಿದಂತೆ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು. ಅಗ್ನಿಶಾಮಕ ದಳ ಮತ್ತು ರಕ್ಷಣಾ ತಂಡಗಳೂ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯ ಕೈಗೊಂಡವು.
ಬಸ್‌ನಲ್ಲಿ 32 ಪ್ರಯಾಣಿಕರಿದ್ದರು ಎನ್ನಲಾಗಿದೆ. 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು ಅವರನ್ನು ಹಿರಿಯೂರು ಹಾಗೂ ಚಿತ್ರದುರ್ಗದ ಆಸ್ಪತ್ರೆಗಳಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.



















































