ಬೆಂಗಳೂರು: ಮೈಸೂರಿನಲ್ಲಿ ಕೋವಿಡ್ ಡೆತ್ ಕೇಸ್‌ಗಳ ಬಗ್ಗೆ ಆಡಿಟ್‌ಗೆ ಸರ್ಕಾರ ಸೂಚಿಸಿದೆ ಎಂದು ಆರೋಗ್ಯ ಸಚಿವ ಡಾ.ಸುಧಾಕರ್ ತಿಳಿಸಿದ್ದಾರೆ.
ಮೈಸೂರಿನಲ್ಲಿ ಕೋವಿಡ್ ನಿಯಂತ್ರಣದ ಬಗ್ಗೆ ಸಭೆ ನಡೆಸಿದ ಬಳಿಕ ಮಾತನಾಡಿದ ಸಚಿವ ಸುಧಾಕರ್, ಮೈಸೂರು ಜಿಲ್ಲೆಯಲ್ಲಿ ಪಾಸಿಟಿವಿಟಿ ದರ ಕಡಿಮೆಯಾಗುತ್ತಿದೆ. ಆದರೆ ಮರಣ ಪ್ರಮಾಣ 3.85% ಇದೆ. ಇದಕ್ಕಾಗಿ ಡೆತ್ ಆಡಿಟ್ ಮಾಡಲಾಗುತ್ತಿದೆ. ದೊಡ್ಡ ಆಸ್ಪತ್ರೆಗಳಲ್ಲಿ ತಂಡ ರಚಿಸಿ ಡೆತ್ ಆಡಿಟ್ ಮಾಡಲು ಸೂಚಿಸಲಾಗಿದೆ ಎಂದು ತಿಳಿಸಿದರು.
ಪಿರಿಯಾಪಟ್ಟಣ ಹಾಗೂ ಬನ್ನೂರಿನಲ್ಲಿ ಹಾಟ್ ಸ್ಪಾಟ್ ಇದ್ದು, ಅಲ್ಲಿ ಕಂಟೇನ್ ಮೆಂಟ್ ವಲಯವಾಗಿ ಪರಿಗಣಿಸಲು ಸೂಚಿಸಲಾಗಿದೆ ಎಂದು ಅವರು ತಿಳಿಸಿದರು.
ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿ ಗುರುತಿಸಿದ 20 ಹಾಟ್ ಸ್ಪಾಟ್ ಗಳಲ್ಲಿ ಮೂರು ಮೈಸೂರು ಜಿಲ್ಲೆಗೆ ಸೇರಿದೆ. ಆಸ್ಪತ್ರೆ ಕಾವಲ್, ಹನಗೋಡು, ಸಿಎಲ್ ಡಿ ಯಲ್ಲಿ ಕಂಟೇನ್ ಮೆಂಟ್ ವಲಯ ಮಾಡಬೇಕೆಂದು ಸೂಚಿಸಲಾಗಿದೆ. 11 ತಜ್ಞರು ಹಾಗೂ 31 ಸಾಮಾನ್ಯ ಕರ್ತವ್ಯ ವೈದ್ಯಾಧಿಕಾರಿಗಳನ್ನು ಜಿಲ್ಲೆಗೆ ನೀಡಿ ಖಾಲಿ ಹುದ್ದೆ ತುಂಬಲಾಗಿದೆ. ಜೊತೆಗೆ ಒಂದು ವರ್ಷ ಸರ್ಕಾರಿ ಕಾರ್ಯನಿರ್ವಹಿಸುವ ಎಂಬಿಬಿಎಸ್ ವೈದ್ಯರ ನೇಮಕಾತಿ ಪೈಕಿ 174 ವೈದ್ಯರನ್ನು ಗುತ್ತಿಗೆ ಆಧಾರದಲ್ಲಿ ನೀಡಲಾಗಿದೆ. ಜಿಲ್ಲೆಯ ಎಲ್ಲಾ ತಾಲೂಕು, ಜಿಲ್ಲಾಸ್ಪತ್ರೆಗಳಲ್ಲಿ ಈ ವೈದ್ಯರು ಕೆಲಸ ಮಾಡಲಿದ್ದಾರೆ. ಮಕ್ಕಳ ವಿಭಾಗದ ಐಸಿಯು ಬಗ್ಗೆ ಇವರಿಗೆ ತರಬೇತಿ ನೀಡಲಾಗುತ್ತದೆ. ಸಂಭವನೀಯ ಮೂರನೇ ಅಲೆ ಬಂದಾಗ ಮಕ್ಕಳಿಗೆ ಹೆಚ್ಚು ಸೋಂಕು ಬಂದರೆ, ಅವರಿಗೆ ಸೂಕ್ತ ಚಿಕಿತ್ಸೆ ನೀಡಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
ಜಿಲ್ಲೆಯಲ್ಲಿ ಕಪ್ಪು ಶಿಲೀಂಧ್ರ ಸೋಂಕು ಹತೋಟಿಗೆ ಬರುತ್ತಿದೆ. 61 ಕ್ಕೂ ಹೆಚ್ಚು ರೋಗಿಗಳಿಗೆ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಲಸಿಕೆ ಸ್ವಲ್ಪ ಕೊರತೆ ಇದ್ದು, ಹೆಚ್ಚು ಲಸಿಕೆ ನೀಡಲು ಕ್ರಮ ವಹಿಸಲಾಗುವುದು ಎಂದರು.