ದೆಹಲಿ, ಡಿ.05: ಈಗಂತೂ ಎಲ್ಲೆಂದರಲ್ಲಿ ಈರುಳ್ಳಿಯದೇ ಸುದ್ದಿ ಸಾಮಾಜಿಕ ಜಾಲತಾಣದಲ್ಲಂತೂ ಚಿನ್ನದಷ್ಟೇ ದುಬಾರಿ ಈರುಳ್ಳಿ ಎಂಬಂತೆ ಬಿಂಬಿಸಲಾಗಿದೆ.. ಈರುಳ್ಳಿಯ ಬೆಲೆ 100ರ ಗಡಿ ದಾಟಿದ್ದು ರಾಜ್ಯಸಭೆ, ಲೋಕಸಭೆಯಲ್ಲೂ ಈರುಳ್ಳಿ ಬೆಲೆ ಬಗ್ಗೆ ತೀವ್ರ ಚರ್ಚೆ ಆಗುತ್ತಿದೆ. ಈ ನಡುವೆ ಕೇಂದ್ರ ಸಚಿವರು ಈರುಳ್ಳಿ ಬಳಕೆಯ ಬಗ್ಗೆ ಮಾತನಾಡಿರುವುದು ದೇಶಾದ್ಯಂತ ಸದ್ದು ಮಾಡುತ್ತಿದೆ.
ಹೌದು, ಲೋಕಸಭೆಯಲ್ಲಿ ಮಾತನಾಡಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹಾಸ್ಯ ಚಟಾಕಿ ಹಾರಿಸಿದ್ದಾರೆ. ಅತಿಯಾದ ಈರುಳ್ಳಿ ಸೇವನೆಯಿಂದ ಜನರಿಗೆ ಆದಷ್ಟು ಬೇಗನೇ ಕೋಪ ಬರುತ್ತದೆ. ನಾನಂತೂ ಹೆಚ್ಚಾಗಿ ಈರುಳ್ಳಿಯನ್ನು ಸೇವನೆ ಮಾಡುವುದಿಲ್ಲ. ನಮ್ಮ ಮನೆಯಲ್ಲಿ ಈರುಳ್ಳಿ ಮತ್ತು ಬೆಳ್ಳುಳ್ಳಿಯನ್ನು ಹೆಚ್ಚಾಗಿ ಬಳಕೆ ಮಾಡುವುದಿಲ್ಲ ಎಂದು ಸಚಿವರು ಹೇಳುತ್ತಿದ್ದಂತೆ ಇಡೀ ಕಲಾಪವೇ ನಗೆಗಡಲಿನಲ್ಲಿ ತೇಲಿತು.
ಕೇಂದ್ರದಿಂದ ಈರುಳ್ಳಿ ಬೆಲೆ ನಿಯಂತ್ರಣ ಲೋಕಸಭೆಯಲ್ಲಿ ಈರುಳ್ಳಿ ಬೆಲೆ ಏರಿಕೆ ಬಗ್ಗೆ ವಿರೋಧ ಪಕ್ಷಗಳು ಪ್ರಸ್ತಾಪಿಸಿದವು. ಈ ಬಗ್ಗೆ ಉತ್ತರ ನೀಡಿದ ಸಚಿವೆ, ಕೇಂದ್ರ ಸರ್ಕಾರ ಈಗಾಗಲೇ ಬೆಲೆ ಏರಿಕೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಸಾಕಷ್ಟು ಕ್ರಮಗಳನ್ನು ತಗೆದುಕೊಂಡಿದೆ ಎಂದರು. ವಿದೇಶಗಳಿಗೆ ಈರುಳ್ಳಿ ರಫ್ತು ಮಾಡುವುದಕ್ಕೆ ನಿರ್ಬಂಧ ವಿಧಿಸಲಾಗಿದೆ. ಕೇಂದ್ರ ಗ್ರಾಹಕ ಸಚಿವಾಲಯದಿಂದಲೇ ಈರುಳ್ಳಿ ಸಂಗ್ರಹಿಸಿಡಲು ಮಿತಿ ನಿಗದಿಗೊಳಿಸಲಾಗಿದೆ. ಸಗಟು ವ್ಯಾಪಾರಿಗಳಿಗೆ 25 ಟನ್ ಹಾಗೂ ಚಿಲ್ಲರೆ ವ್ಯಾಪಾರಿಗಳಿಗೆ 5 ಟನ್ ಗಳ ಮಿತಿ ನಿಗದಿಗೊಳಿಸಲಾಗಿದೆ. ಅಲ್ಲದೆ ದೇಶದಲ್ಲಿ ಈರುಳ್ಳಿ ಬೆಲೆ ಏರಿಕೆಗೆ ಮಧ್ಯವರ್ತಿಗಳ ಹಾವಳಿಯೇ ಮುಖ್ಯ ಕಾರಣ ಎಂದು ನಿರ್ಮಲಾ ಸೀತಾರಾಮನ್ ಆರೋಪಿಸಿದ್ದಾರೆ. ಆದ್ದರಿಂದ ರೈತರಿಗೆ ಮಾರುಕಟ್ಟೆಯ ನೇರ ಸಂಪರ್ಕ ವ್ಯವಸ್ಥೆ ಜಾರಿಗೊಳಿಸಿದರೆ, ಇದಕ್ಕೆಲ್ಲ ಕಡಿವಾಣ ಹಾಕಲು ಕೊಂಚ ಮಟ್ಟಿಗೆ ಸಹಾಯವಾಗಲಿದೆ ಎಂದು ಸಚಿವರು ತಿಳಿಸಿದ್ದಾರೆ.