ಬೆಂಗಳೂರು: ಕೈಗಾರಿಕೆಗಳಿಗೆ ಸಂಬಂಧಿಸಿದಂತೆ ಎಲ್ಲಾ ಪ್ರಶ್ನೆಗಳಿಗೂ ಉತ್ತರ ನೀಡುವಂತಹ ಏಕಗವಾಕ್ಷಿ ವೆಬ್ಸೈಟನ್ನು ಸದ್ಯದಲ್ಲೇ ಪ್ರಾರಂಭಿಸಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವರಾದ ಶ್ರೀ ಜಗದೀಶ್ ಶೆಟ್ಟರ್ ಹೇಳಿದ್ದಾರೆ.
ಬೆಂಗಳೂರಿನ ಖಾಸಗಿ ಹೋಟೇಲ್ ನಲ್ಲಿ ಎಫ್ಸಿಐ ವತಿಯಿಂದ ಆಯೋಜಿಸಲಾಗಿದ್ದ ಫಾರಿನ್ ಇನ್ವೆಸ್ಟರ್ಸ್ ಕೌನ್ಸಿಲ್ ಕರ್ನಾಟಕ ಚಾಪ್ಟರ್ ನ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು. ರಾಜ್ಯ ಸರಕಾರ ರಾಜ್ಯದಲ್ಲಿ ಹೆಚ್ಚಿನ ಬಂಡವಾಳ ಹೂಡಿಕೆ ಹಾಗೂ ಕೈಗಾರಿಕೆಗಳ ಸ್ಥಾಪನೆ ಆಗಬೇಕು ಎನ್ನುವ ನಿಟ್ಟಿನಲ್ಲಿ ಹೆಚ್ಚಿನ ಗಮನ ಹರಿಸಿದೆ. ಅಲ್ಲದೆ ಉದ್ಯಮ ಸ್ನೇಹಿ ಉಪಕ್ರಮಗಳನ್ನು ಅನುಷ್ಠಾನಗೊಳಿಸುವತ್ತ ಹೆಚ್ಚಿನ ಗಮನ ಹರಿಸುತ್ತಿದೆ. ಈ ನಿಟ್ಟಿನಲ್ಲಿ ಈಗಾಗಲೇ ಹೊಸ ಕೈಗಾರಿಕಾ ನೀತಿ ಯನ್ನು ಜಾರಿಗೊಳಿಸಿದ್ದು ಹಾಗೂ ಕೈಗಾರಿಕಾ ಸೌಲಭ್ಯ ಅಧಿನಿಯಮದಲ್ಲಿ ಅಮೂಲಾಗ್ರ ಬದಲಾವಣೆಯನ್ನು ಮಾಡಿರುವ ದೇಶದ ಮೊದಲ ರಾಜ್ಯ ಎನ್ನುವ ಹೆಗ್ಗಳಿಕೆ ನಮ್ಮದಾಗಿದೆ ಎಂದರು.
ಏಕಗವಾಕ್ಷಿ ಯೋಜನೆಯ ಮೂಲಕ ಕೈಗಾರಿಕೆಗಳ ಸ್ಥಾಪನೆಗೆ ಅನುಕೂಲವಾಗುವ ನಿಟ್ಟಿನಲ್ಲಿ ಅನೇಕ ನೀತಿಗಳನ್ನು ರೂಪಿಸಲಾಗುತ್ತಿದೆ. ಅಲ್ಲದೆ, ಈಸ್ ಆಫ್ ಡೂಯಿಂಗ್ ಬ್ಯೂಸಿನೆಸ್ ನ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಬಂಡವಾಳ ಹೂಡಿಕೆಗೆ ಸಮಸ್ಯೆಗಳಿಗೂ ಪರಿಹಾರ ನೀಡುವಂತಹ ವೆಬ್ಸೈಟ ನ್ನು ರಚಿಸಲಾಗುತ್ತಿದೆ. ಈ ವೆಬ್ ಸೈಟ್ ನಲ್ಲಿ ಎಲ್ಲಾ ಪ್ರಶ್ನೆಗಳಿಗೆ ಉತ್ತರ ದೊರೆಯಲಿದೆ. ಹಾಗೆಯೇ ಸಮಸ್ಯೆಗಳ ಪರಿಹಾರಕ್ಕೆ ವಿಳಂಬ ತೋರುವ ಅಧಿಕಾರಿಗಳಿಗೆ ರಿಮೈಂಡರ್ ನೀಡುವ ವ್ಯವಸ್ಥೆಯೂ ಇರಲಿದೆ ಎಂದು ಹೇಳಿದರು.