ಬೆಂಗಳೂರು: ನವೆಂಬರ್ ಅಂತ್ಯದೊಳಗೆ ರಾಜ್ಯದ ಎಲ್ಲ ವಯಸ್ಕರಿಗೂ ಎರಡೂ ಡೋಸ್ ಕೋವಿಡ್ ಲಸಿಕೆ ಪೂರ್ಣಗೊಳಿಸುವ ಗುರಿಯನ್ನು ನಿಗದಿಪಡಿಸಿ ಕಾರ್ಯನಿರ್ವಹಿಸಲಾಗುತ್ತಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ
ಕೋವಿಡ್ ಲಸಿಕಾ ಅಭಿಯಾನದಲ್ಲಿ ಕಡಿಮೆ ಸಾಧನೆ ಮಾಡಿದ 23 ಜಿಲ್ಲೆಗಳೊಂದಿಗೆ ವೀಡಿಯೋ ಸಂವಾದ ನಡೆಸಿದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಲಸಿಕೆ ಅಭಿಯಾನಕ್ಕೆ ವೇಗ ನೀಡುವ ಬಗ್ಗೆ ಹಾಗೂ ಈ ತಿಂಗಳೊಳಗೆ ಎಲ್ಲರಿಗೂ ಮೊದಲ ಡೋಸ್ ಪೂರ್ಣಗೊಳಿಸಲು ಸೂಚಿಸಲಾಗಿದೆ. ನವೆಂಬರ್ ಅಂತ್ಯದೊಳಗೆ ಎಲ್ಲ ವಯಸ್ಕರಿಗೆ ಲಸಿಕೆ ನೀಡುವ ಗುರಿ ತಲುಪಬೇಕೆಂದು ಸೂಚನೆ ನೀಡಲಾಗಿದೆ. ಜೊತೆಗೆ ಕೊರೊನಾ ಪರೀಕ್ಷೆ, ಆಕ್ಸಿಜನ್ ಘಟಕ ಆರಂಭ, ಸಿವಿಲ್ ಕಾರ್ಯ ಮೊದಲಾದವುಗಳ ಬಗ್ಗೆ ಚರ್ಚಿಸಲಾಗಿದೆ. ಮುಖ್ಯಮಂತ್ರಿಗಳು ಕೂಡ ಹಲವು ಸಲಹೆ, ಸೂಚನೆ ನೀಡಿದ್ದಾರೆ ಎಂದರು.
ಕಳೆದ ವರ್ಷ ಹೆಚ್ಚು ಸೋಂಕಿತರಿದ್ದಾಗಲೂ ಸರಳ ಗಣೇಶೋತ್ಸವಕ್ಕೆ ಅವಕಾಶ ನೀಡಲಾಗಿತ್ತು. ಈ ವರ್ಷ 0.7% ಪಾಸಿಟಿವಿಟಿ ದರವಿದ್ದು, ಹೆಚ್ಚು ಸುರಕ್ಷತಾ ನಿಯಮ ಪಾಲಿಸಲು ಸೂಚಿಸಲಾಗಿದೆ. ಯಾವುದೇ ಜಿಲ್ಲೆಯಲ್ಲಿ 2% ಗಿಂತ ಹೆಚ್ಚಾದರೆ ಅಲ್ಲಿ ಬೇರೆ ಕ್ರಮ ವಹಿಸಲಾಗುತ್ತದೆ ಎಂದರು.
ಕೇರಳದಲ್ಲಿ ಒಬ್ಬ ಬಾಲಕನಿಗೆ ನಿಫಾ ವೈರಸ್ ಸೋಂಕು ಕಂಡುಬಂದಿದೆ. ಈ ಸೋಂಕು ರಾಜ್ಯದಲ್ಲಿ ಎಲ್ಲೂ ಹರಡದಂತೆ ಕ್ರಮ ವಹಿಸಲಾಗಿದೆ. ಗಡಿಭಾಗಗಳಲ್ಲೂ ಕಟ್ಟೆಚ್ಚರ ವಹಿಸಲಾಗಿದೆ. ಮೂರನೇ ಅಲೆ ತಡೆಗಟ್ಟುವುದು ಮುಖ್ಯವಾದ ಗುರಿ. ಇದಕ್ಕೆ ಬೇಕಾದ ಸಿದ್ಧತೆ ಮಾಡಿಕೊಳ್ಳಲಾಗಿದೆ. ಆದರೆ ಮೊದಲು ಅಲೆಯನ್ನು ತಡೆಯಬೇಕಿದೆ ಎಂದರು.