ನವದೆಹಲಿ: ಗಂಭೀರ ಆರೋಪ ಎದುರಿಸುತ್ತಿರುವ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ಆಪ್ತನೇ ಕುಸ್ತಿ ಫೆಡರೇಶನ್‌ನ ಸಾರಥ್ಯ ವಹಿಸುತ್ತಿದ್ದಂತೆಯೇ ಕುಸ್ತಿಪಟುಗಳ ಆಕ್ರೋಶ ಸ್ಫೋಟಗೊಂಡಿವೆ. ಕುಸ್ತಿ ಫೆಡರೇಶನ್‌ನ ನೂತನ ಅಧ್ಯಕ್ಷರಾಗಿ ಬ್ರಿಜ್ ಭೂಷಣ್ ಶರಣ್ ಸಿಂಗ್ ಆಪ್ತ ಸಂಜಯ್ ಸಿಂಗ್ ಆಯ್ಕೆಯಾದ ಬೆನ್ನಲ್ಲೇ ವ್ಯಾಪಕ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಕುಸ್ತಿ ಫೆಡರೇಶನ್‌ನ ಹೊಸ ಸಮಿತಿಯನ್ನು ಕ್ರೀಡಾ ಸಚಿವಾಲಯವು ಅಮಾನತುಗೊಳಿಸಿದೆ.
ಅಸ್ತಿತ್ವದಲ್ಲಿರುವ ನಿಯಮಗಳು ಮತ್ತು ನಿಬಂಧನೆಗಳನ್ನು ಕಡೆಗಣಿಸಲಾಗಿದೆ ಎಂಬ ಕಾರಣ ನೀಡಿ WFIನ್ನು ಅಮಾನತು ಮಾಡಲಾಗಿದೆ.
ನೂತನವಾಗಿ ಅಧಿಕಾರವಹಿಸಿಕೊಂಡಿರುವ ಅಧ್ಯಕ್ಷ ಸಂಜಯ್ ಕುಮಾರ್ ಸಿಂಗ್ ಅವರು ಡಿಸೆಂಬರ್ 21ರಂದು ಹೇಳಿಕೆ ನೀಡಿ, ಜೂನಿಯರ್ ರಾಷ್ಟ್ರೀಯ ಸ್ಪರ್ಧೆಗಳು ಈ ವರ್ಷಾಂತ್ಯದ ಮೊದಲು ಪ್ರಾರಂಭವಾಗಲಿದೆ ಎಂದು ಘೋಷಿಸಿದ್ದರು ಎನ್ನಲಾಗಿದೆ. ಅವರ ಈ ನಿರ್ಧಾರ ನಿಯಮಬಾಹಿರ ಎಂದಿರುವ ಕ್ರೀಡಾ ಸಚಿವಾಲಯ, ಕುಸ್ತಿಪಟುಗಳು ತಯಾರಾಗಲು ಕನಿಷ್ಠ 15 ದಿನಗಳ ಸೂಚನೆ ಅಗತ್ಯವಿದೆ. ಆದರೆ ಈ ವಿಚಾರದಲ್ಲಿ ನಿಯಮ ಅನುಸರಿಸಿಲ್ಲ ಎಂದು ಸಚಿವಾಲಯ ಆಕ್ಷೇಪಿಸಿದೆ. ಕ್ರೀಡಾ ಸಂಹಿತೆಯನ್ನು ಸಂಪೂರ್ಣವಾಗಿ ಕಡೆಗಣಿಸಿರುವ WFIನ್ನು ಅಮಾನತು ಮಾಡಲಾಗಿದೆ ಎಂದಿರುವ ಸಚಿವಾಲಯ, ನೂತನ ಸಮಿತಿಯನ್ನು ರಚಿಸುವ ಸುಳಿವನ್ನೂ ನೀಡಿದೆ.