ಬೆಂಗಳೂರು: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮಾಜಿ ಸಚಿವ ಗೋವಿಂದ ಕಾರಜೋಳ ಅವರಿಗೆ ಚಿತ್ರದುರ್ಗ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಬಿಜೆಪಿ ಟಿಕೆಟ್ ಪ್ರಕಟಿಸಿದೆ. ಈ ಮೂಲಕ. ಬಿಜೆಪಿ ಹಿರಿಯ ನಾಯಕನಿಗೆ ಈ ಬಾರಿಯ ಅದೃಷ್ಟ ಪರೀಕ್ಷೆಯ ಅವಕಾಶ ಸಿಕ್ಕಿದೆ.
ಹಾಲಿ ಕೇಂದ್ರ ಸಚಿವ ಎ ನಾರಾಯಣಸ್ವಾಮಿ ಅವರ ಬದಲಿಗೆ ಪಕ್ಷದ ಹಿರಿಯ ನಾಯಕ ಹಾಗೂ ಮಾಜಿ ಉಪ ಮುಖ್ಯಮಂತ್ರಿ ಗೋವಿಂದ್ ಎಂ ಕಾರಜೋಳ ಅವರಿಗೆ ಬಿಜೆಪಿ ಟಿಕೆಟ್ ನೀಡಿದ್ದು ರಾಜಕೀಯದಲ್ಲಿ ಹೊಸ ಲೆಕ್ಕಾಚಾರ ಆರಂಭವಾಗಿದೆ. ಬಾಗಲಕೋಟೆ ಜಿಲ್ಲೆಯ ಮುಧೋಳ ಕ್ಷೇತ್ರದಿಂದ ಐದು ಬಾರಿ ಗೆಲುವು ಸಾಧಿಸಿದ್ದ ಕಾರಜೋಳ ಅವರು 2023ರ ವಿಧಾನಸಭಾ ಚುನಾವಣೆಯಲ್ಲಿ ಮುಧೋಳದಿಂದ ಸ್ಪರ್ಧಿಸಿ ಸೋಲು ಅನುಭವಿಸಿದ್ದರು. ಇದೀಗ ಚಿತ್ರದುರ್ಗ ಕ್ಷೇತ್ರ ಕಾರಜೋಳ ಅವರಿಗೆ ರಾಜಕೀಯ ಮರುಜೀವ ನೀಡುತ್ತಾ ಎಂಬುದನ್ನು ಕಾದುನೋಡಬೇಕಿದೆ.
73 ವರ್ಷ ಹರೆಯದ ಗೋವಿಂದ ಕಾರಜೋಳ ಅವರು ಬಿಜೆಪಿ ಸರ್ಕಾರಗಳಲ್ಲಿ ವಿವಿಧ ಖಾತೆಗಳ ಸಚಿವರಾಗಿ, ವಿಧಾನಸಭೆಯಲ್ಲಿ ವಿರೋಧ ಪಕ್ಷದ ಉಪನಾಯಕರಾಗಿ, ಪಕ್ಷದ ರಾಜ್ಯ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.

























































