ಕಾಂಗ್ರೆಸ್ಗೆ ಗುಲಾಂ ನಬೀ ಆಜಾದ್ ರಾಜೀನಾಮೆ ನೀಡಿರು ಬೆಳವಣಿಗೆ ಬಗ್ಗೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ನಾಯಕರೂ ಅಸಮಾಧಾನ ಹೊರಹಾಕಿದ್ದಾರೆ. ಈ ಕುರಿತಂತೆ ಪ್ರತಿಕ್ರಿಯಿಸಿರುವ ವಿಧಾನಸಭೆಯ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರಾದ ಗುಲಾಂ ನಬೀ ಆಜಾದ್ ಅವರು ಪಕ್ಷಕ್ಕೆ ರಾಜೀನಾಮೆ ನೀಡಿರುವುದು ವಿಷಾದನೀಯ ಬೆಳವಣಿಗೆ ಎಂದಿದ್ದಾರೆ.
ಸುಮಾರು ಐದು ದಶಕಗಳ ಕಾಲ ಕಾಂಗ್ರೆಸ್ ಪಕ್ಷದಲ್ಲಿ ಸಕ್ರಿಯರಾಗಿದ್ದ ಆಜಾದ್ ಅವರು ಪಕ್ಷವನ್ನು ಕಟ್ಟಿ ಬೆಳೆಸಲು ನೀಡಿರುವ ಕೊಡುಗೆಯನ್ನು ಸ್ಮರಿಸುತ್ತಲೇ, ಅವರ ಈ ದಿಡೀರ್ ನಿರ್ಧಾರವನ್ನು ಖಂಡಿಸಬೇಕಾಗಿ ಬಂದಿದೆ ಎಂದವರು ಹೇಳಿದ್ದಾರೆ.
ಇತ್ತೀಚಿನ ಚುನಾವಣೆಗಳಲ್ಲಿನ ಹಿನ್ನಡೆಯಿಂದಾಗಿ ಕಾಂಗ್ರೆಸ್ ಪಕ್ಷ ಕಷ್ಟದ ದಿನಗಳಲ್ಲಿದೆ. ಇದಕ್ಕಿಂತಲೂ ಮುಖ್ಯವಾಗಿ ಸರ್ವಾಧಿಕಾರಿ ಪ್ರಭುತ್ವದಿಂದಾಗಿ ದೇಶ ಕಷ್ಟದಲ್ಲಿದೆ. ಪ್ರಜಾಪ್ರಭುತ್ವ ವ್ಯವಸ್ಥೆ ಗಂಡಾಂತರದಲ್ಲಿದೆ. ಸಂವಿಧಾನದ ಒಂದೊಂದು ಸ್ಥಂಭಗಳೇ ನಮ್ಮ ಕಣ್ಣೆದುರಿಗೆ ಉರುಳಿ ಬೀಳುತ್ತಿದೆ ಎಂದ ಅವರು, ದೇಶಾದ್ಯಂತ ದಲಿತರು, ಹಿಂದುಳಿದ ಜಾತಿಗಳು ಮತ್ತು ಅಲ್ಪಸಂಖ್ಯಾತ ಸಮುದಾಯಗಳನ್ನು ಗುರಿಯಾಗಿಟ್ಟುಕೊಂಡು ಹಲ್ಲೆ-ದೌರ್ಜನ್ಯಗಳು ನಡೆಯುತ್ತಿವೆ. ಈ ಸಮುದಾಯಗಳ ಪ್ರಜಾಸತ್ತಾತ್ಮಕ ಹಕ್ಕುಗಳನ್ನು ಕಿತ್ತುಕೊಂಡು ಅವರನ್ನು ದುರ್ಬಲರನ್ನಾಗಿ ಮಾಡಲಾಗುತ್ತಿದೆ ಎಂದಿದ್ದಾರೆ.
ಇಂತಹ ಪರಿಸ್ಥಿತಿಯಲ್ಲಿ ಗುಲಾಂ ನಬೀ ಆಜಾದ್ ಅವರಂತಹ ಅಪಾರ ಅನುಭವ ಮತ್ತು ಸಂಘಟನಾ ಸಾಮರ್ಥ್ಯ ಹೊಂದಿರುವ ನಾಯಕರ ಅಗತ್ಯ ಖಂಡಿತ ಪಕ್ಷಕ್ಕೆ ಮಾತ್ರವಲ್ಲ ದೇಶಕ್ಕೂ ಕೂಡಾ ಇದೆ ಎನ್ನುವುದನ್ನು ನಿರಾಕರಿಸಲಾಗದು. ಸುಮಾರು ಐದುದಶಕಗಳ ಸುದೀರ್ಘ ರಾಜಕೀಯ ಜೀವನವನ್ನು ಕಾಂಗ್ರೆಸ್ ಪಕ್ಷದಲ್ಲಿ ಕಳೆದಿರುವ ಗುಲಾಂ ನಬೀ ಆಜಾದ್ ಅವರಿಗೆ ಕಾಂಗ್ರೆಸ್ ನೀಡಿರುವ ಕೊಡುಗೆ ಅಪಾರವಾದುದು, ಅದೇ ರೀತಿ ಕಾಂಗ್ರೆಸ್ ಪಕ್ಷಕ್ಕೂ ಅವರ ಕೊಡುಗೆಯನ್ನು ಅಲ್ಲಗಳೆಯಲಾಗದು ಎಂದಿದ್ದಾರೆ.