ಬೆಂಗಳೂರು: ಬೆಂಗಳೂರಿನಲ್ಲಿ ಕಸದ ಸೆಸ್ ಹೆಸರಿನಲ್ಲಿ ಕಾಂಗ್ರೆಸ್ ಸರ್ಕಾರ ಜನರನ್ನು ಲೂಟಿ ಮಾಡುತ್ತಿದೆ. ಇಡೀ ಬೆಂಗಳೂರನ್ನು ಸರ್ಕಾರ ದುಬಾರಿ ಮಾಡಿದೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರದಲ್ಲಿ ಹಣ ಉಳಿದಿಲ್ಲ. ಹಿಂದೆ ಇದ್ದ ತುಘಲಕ್ ಕೂಡ ಹಾಕದಷ್ಟು ತೆರಿಗೆಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಜನರ ಮೇಲೆ ಹಾಕಿದ್ದಾರೆ. ಕಸ ವಿಲೇವಾರಿ ಮಾಡಲು ಕೂಡ ತೆರಿಗೆ ಹಾಕಲಾಗಿದೆ. 30×40 ಅಡಿ ವಿಸ್ತೀರ್ಣದ ಮನೆಗೆ 120 ರೂ. ಇದ್ದ ಕಸದ ತೆರಿಗೆಯನ್ನು 720 ರೂ. ಮಾಡಿದ್ದಾರೆ. ಅಂದರೆ 500% ರಷ್ಟು ಹೆಚ್ಚಾಗಿದೆ. ಅಪಾರ್ಟ್‌ಮೆಂಟ್ ನಿವಾಸಿಗಳು ಕಸವನ್ನು ಅವರೇ ವಿಲೇವಾರಿ ಮಾಡಿಕೊಳ್ಳುತ್ತಿದ್ದು, ಅವರಿಗೆ ಕಸದ ಸೆಸ್ 1,800 ರೂ. ನಿಂದ 18,000 ರೂ. ಗೆ ಹೆಚ್ಚಿಸಲಾಗಿದೆ ಎಂದು ದೂರಿದರು.
ಮಾಲ್‌ಗಳಲ್ಲಿ 3,600 ರೂ. ಇದ್ದ ಕಸದ ಸೆಸ್ 52,500 ರೂ. ಆಗಿದ್ದು, 14,483% ಹೆಚ್ಚಿದೆ. ಆಸ್ಪತ್ರೆಗಳಲ್ಲಿ ಕಸದ ಸೆಸ್ 9,600 ರೂ. ನಿಂದ 2,75,000 ರೂ. ಆಗಿದೆ. 50*80 ವಿಸ್ತೀರ್ಣದ ಖಾಲಿ ನಿವೇಶನಗಳಿಗೆ 600 ರೂ. ನಿಂದ 5,400 ರೂ. ಆಗಿದೆ. ಕಸವೇ ಉತ್ಪತ್ತಿ ಆಗದ ಜಾಗದಲ್ಲಿ ಬಿಬಿಎಂಪಿಯಿಂದ ದುಡ್ಡು ಉತ್ಪತ್ತಿ ಮಾಡಲಾಗುತ್ತಿದೆ ಎಂದರು.
ಜಮೀನುಗಳಿಗೆ ಬಳಕೆದಾರರ ಶುಲ್ಕ 3,600 ರೂ. ನಿಂದ 67,000 ರೂ. ಆಗಿ 1,761% ಹೆಚ್ಚಾಗಿದೆ. 110 ಹಳ್ಳಿಗಳಲ್ಲಿ ಲಕ್ಷಾಂತರ ಜಮೀನುಗಳಿವೆ. ಅವುಗಳ ಮಾಲೀಕರು ಲಕ್ಷಾಂತರ ರೂಪಾಯಿ ಕಸದ ಸೆಸ್ ಪಾವತಿಸಬೇಕಿದೆ. ಬಳಕೆದಾರರ ಶುಲ್ಕವನ್ನು ನಾವು ಪಾವತಿಸುವುದಿಲ್ಲ ಎಂದು ಬೆಂಗಳೂರಿನ 2,800 ಜನರು ಆನ್‌ಲೈನ್ ಆಂದೋಲನ ಆರಂಭಿಸಿದ್ದಾರೆ. ಕಾಂಗ್ರೆಸ್ ಸರ್ಕಾರ ಬಿಬಿಎಂಪಿಯ ಮೂಲಕ ಜನರನ್ನು ಲೂಟಿ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬೆಂಗಳೂರಿನಲ್ಲಿ ಕಳೆದೆರಡು ವರ್ಷಗಳಲ್ಲಿ ಅಭಿವೃದ್ಧಿ ಕಾರ್ಯ ನಡೆದಿಲ್ಲ. ಜನರು ಅತಿ ಹೆಚ್ಚು ತೆರಿಗೆ ಪಾವತಿಸುತ್ತಿದ್ದರೂ, ಅಭಿವೃದ್ಧಿಗೆ ಹಣ ನೀಡದೆ ತೆರಿಗೆ ವಸೂಲಿ ಮಾಡಲಾಗುತ್ತಿದೆ ಎಂದರು.