ಬೆಂಗಳೂರು: ದೇಶದ ಇತಿಹಾಸದಲ್ಲೇ ಮೊದಲ ಬಾರಿಗೆ ಗ್ಯಾರಂಟಿ ಯೋಜನೆಗಳನ್ನು ಒಳಗೊಂಡ ಅಭಿವೃದ್ಧಿಯ ಹೊಸ ಮಾದರಿಯನ್ನು ಪರಿಚಯಿಸಿದ ಹೆಮ್ಮೆ ನಮ್ಮದು. ಕಳೆದ ಸಾವಿರ ದಿನಗಳಲ್ಲಿ ರೂ.1.13 ಲಕ್ಷ ಕೋಟಿ ಹಣವನ್ನು ಗ್ಯಾರಂಟಿ ಯೋಜನೆಗಳ ಮೂಲಕ ಜನರ ಮನೆ ಬಾಗಿಲಿಗೆ ತಲುಪಿಸಿದ್ದೇವೆ, ಇದರ ಜೊತೆ ರೂ.1 ಲಕ್ಷ ಕೋಟಿಗೂ ಅಧಿಕ ಮೊತ್ತದ ಅಭಿವೃದ್ಧಿ ಕಾರ್ಯಗಳನ್ನು ಅನುಷ್ಠಾನಕ್ಕೆ ಕೊಡಲಾಗಿದೆ. ರಾಜ್ಯದ 1.37 ಕೋಟಿ ಕುಟುಂಬಗಳು ನಮ್ಮ ಸರ್ಕಾರದ ಒಂದಿಲ್ಲೊಂದು ಯೋಜನೆಯ ನೇರ ಫಲಾನುಭವಿಯಾಗಿದ್ದಾರೆ ಎನ್ನುವುದು ವಿಶೇಷ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.
ನಮ್ಮ ಕಲ್ಯಾಣ ಕಾರ್ಯಕ್ರಮಗಳ ಫಲವಾಗಿ ರಾಜ್ಯದ ತಲಾದಾಯವು ದೇಶದಲ್ಲೇ ನಂಬರ್ ಒನ್ ಸ್ಥಾನಕ್ಕೇರಿದೆ. ಕೋಮುಗಲಭೆ, ಅಸಹಿಷ್ಣುತೆಯಿಂದ ನಲುಗಿದ್ದ ಕರ್ನಾಟಕದಲ್ಲಿ ಇಂದು ಶಾಂತಿ – ನೆಮ್ಮದಿ ನೆಲೆಸಿದೆ. ಇದರಿಂದ ನಿರೀಕ್ಷೆಗೂ ಮೀರಿದ ವಿದೇಶಿ ಬಂಡವಾಳ ಹೂಡಿಕೆ ಯೋಜನೆಗಳು ರಾಜ್ಯದತ್ತ ಹರಿದು ಬರುತ್ತಿವೆ ಎಂದವರು ತಿಳಿಸಿದ್ದಾರೆ.
ಕರ್ನಾಟಕವನ್ನು ಸರ್ವಜನಾಂಗದ ಶಾಂತಿಯ ತೋಟವಾಗಿಸಬೇಕು ಎನ್ನುವ ಸಂಕಲ್ಪದೊಂದಿಗೆ ಅಧಿಕಾರಕ್ಕೆ ಬಂದ ನಮ್ಮ ಸರ್ಕಾರವು, ಆ ಹಾದಿಯಲ್ಲಿ ಯಶಸ್ವಿಯಾಗಿ ಮುನ್ನಡೆಯುತ್ತಿದ್ದು ಇದಕ್ಕೆ ಕಾರಣೀಕರ್ತರಾದ ತಮಗೆ ಹೃದಯಪೂರ್ವಕ ಧನ್ಯವಾದ ಸಲ್ಲಿಸುತ್ತಿದ್ದೇನೆ. ನಮ್ಮ ಈ ಎಲ್ಲಾ ಸಾಧನೆಗಳ ಶ್ರೇಯ ರಾಜ್ಯದ ಪ್ರತಿ ನಾಗರಿಕನಿಗೆ ಸಲ್ಲಬೇಕು ಎಂದು ಸಿಎಂ ಹೇಳಿದ್ದಾರೆ.
‘ನಿಮ್ಮೆಲ್ಲರ ಆಶೀರ್ವಾದ, ಬೆಂಬಲದೊಂದಿಗೆ ಸಾವಿರ ದಿನದ ಪಯಣವನ್ನು ಯಶಸ್ವಿಯಾಗಿ ಪೂರೈಸಿರುವ ನಮ್ಮ ಸರ್ಕಾರಕ್ಕೆ ಮುಂದೆಯೂ ನಿಮ್ಮ ಪ್ರೀತಿ, ಸಹಕಾರವಿರಲಿ’ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.



























































