ನವದೆಹಲಿ,ಸೆ.14: ಕನ್ನಡ ಭಾಷೆಯಲ್ಲೇ ಬ್ಯಾಂಕಿಂಗ್ ಪರೀಕ್ಷೆ ಬರೆಯಲು ಅನುಮತಿ ನೀಡಬೇಕೆಂಬ ಕನ್ನಡಿಗರ ಹೋರಾಟಕ್ಕೆ, ಒತ್ತಾಯಕ್ಕೆ ಕೊನೆಗೂ ಕೇಂದ್ರ ಸರ್ಕಾರ ಮಣಿದಿದೆ. ಪ್ರಾದೇಶಿಕ ಭಾಷೆಗಳಲ್ಲೇ ಬ್ಯಾಂಕಿಂಗ್ ಪರೀಕ್ಷೆ ಬರೆಯಬಹುದು ಎಂಬುದಾಗಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಟ್ವೀಟ್ ಮಾಡುವ ಮೂಲಕ ಬ್ಯಾಂಕಿಂಗ್ ಪರೀಕ್ಷಾ ಅಭ್ಯರ್ಥಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ.
ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‍ಗಳ ‘ಕಚೇರಿ ದರ್ಜೆ 1’ ಮತ್ತು ‘ಕಚೇರಿ ಸಹಾಯಕ’ ಹುದ್ದೆಗಳ ಆನ್‍ಲೈನ್ ಮುಖ್ಯ ಪರೀಕ್ಷೆಯನ್ನು ಇಂಗ್ಲಿಷ್, ಆಯಾ ರಾಜ್ಯಗಳ ಪ್ರಾದೇಶಿಕ ಭಾಷೆಗಳಲ್ಲಿ ಬರೆಯಬಹುದು. ಪರೀಕ್ಷೆಯ ಪರಿಷ್ಕತ ವೇಳಾಪಟ್ಟಿಯನ್ನು ಇದೇ 16ರಂದು ಸಿಬ್ಬಂದಿ ಆಯ್ಕೆ ಸಂಸ್ಥೆಯ ವೆಬ್ ಸೈಟ್ ನಲ್ಲಿ ಪ್ರಕಟಿಸಲಾಗುವುದು’ ಎಂಧು ಹಣಕಾಸು ಸಚಿವಾಲಯದ ಟ್ವೀಟ್ ಉಲ್ಲೇಖಿಸಿದೆ.
ಐಬಿಪಿಎಸ್ ಕರೆದಿರುವ ಬ್ಯಾಂಕಿಂಗ್ ನೇಮಕಾತಿ ಪರೀಕ್ಷೆಯಲ್ಲಿ ಕನ್ನಡ ಸೇರಿದಂತೆ 19 ಪ್ರಾದೇಶಿಕ ಭಾಷೆಗಳಲ್ಲಿ ಬ್ಯಾಂಕಿಂಗ್ ಪರೀಕ್ಷೆ ಬರೆಯಲು ಸದ್ಯ ಅಭ್ಯರ್ಥಿಗಳಿಗೆ ಅವಕಾಶ ಕಲ್ಪಿಸಲಾಗಿದೆ. ಆದರೆ ಇದು ಬರಿಯ ಪ್ರಾದೇಶಿಕ ಗ್ರಾಮೀಣ ಬ್ಯಾಂಕ್ ಗಳಿಗೆ ಸೀಮಿತವಾಗಿದೆ. ರಾಷ್ಟ್ರೀಕೃತ ಬ್ಯಾಂಕ್ ಗಳಿಗೆ ಇಂಗ್ಲಿಷ್ ಅಥವಾ ಹಿಂದಿಯಲ್ಲಿ ಮಾತ್ರ ಬರೆಯುವಂತೆ ತಿಳಿಸಿದೆ. ಇದು ಕನ್ನಡಿಗರಿಗೆ ಸ್ವಲ್ಪ ಸಿಹಿ, ಇನ್ನೂ ಸ್ವಲ್ಪ ಕಹಿ ವಿಚಾರವಾಗಿ ಪರಿಣಮಿಸಿದೆ.