ಚಿತ್ರದುರ್ಗ: ಕೋಟೆ ನಾಡಿನ ಮನೆಯಲ್ಲಿ ಐದು ಅಸ್ಥಿಪಂಜರಗಳು ಪತ್ತೆಯಾದ ಪ್ರಕರಣ ಸಂಬಂಧ ಪೊಲೀಸರು ತನಿಖೆಯನ್ನು ಬಿರುಸುಗೊಳಿಸಿದ್ದಾರೆ.
ಚಿತ್ರದುರ್ಗದ ದೊಡ್ಡಸಿದ್ದವ್ವನ ಹಳ್ಳಿ ಮೂಲದ ನಿವೃತ್ತ ಎಂಜಿನಿಯರ್ ಜಗನ್ನಾಥ್ ರೆಡ್ಡಿ, ಪತ್ನಿ ಪ್ರೇಮಾ, ಪುತ್ರಿ ತ್ರಿವೇಣಿ, ಪುತ್ರರಾದ ನರೇಂದ್ರ ರೆಡ್ಡಿ ಹಾಗೂ ಕೃಷ್ಣಾರೆಡ್ಡಿ ಅವರ ಮೃತದೇಹ ಕಳೆದ ಡಿಸೆಂಬರ್ 28ರಂದು ಅಸ್ಥಿಪಂಜರ ರೂಪದಲ್ಲಿ ಪತ್ತೆಯಾಗಿದ್ದವು. ಈ ಬಗ್ಗೆ ಪ್ರಕರಣದ ದಾಖಲಿಸಿದ್ದ ಪೊಲೀಸರು ಸತ್ಯಾಸತ್ಯತೆ ತಿಳಿಯಲು ಎಫ್‌ಎಸ್‌ಎಲ್ ಮೊರೆ ಹೋಗಿದ್ದರು.
ಸಾವಿಗೆ ನಿಖರ ಕಾರಣ ಏನೆಂಬುದು ತಿಳಿದುಬಂದಿಲ್ಲ. ಆದರೆ ಎಫ್‌ಎಸ್‌ಎಲ್ ಅಂತಿಮ ವರದಿ ಪೊಲೀಸರ ಕೈ ಸೇರಿದ್ದು, ಸಾವಿಗೆ ನಿದ್ರೆ ಮಾತ್ರೆ ಸೇವನೆಯೇ ಕಾರಣ ಎಂಬುದು ಗೊತ್ತಾಗಿದೆ ಎಂದು ಚಿತ್ರದುರ್ಗ ಜಿಲ್ಲಾ ಎಸ್‌ಪಿ ಧರ್ಮೇಂದರ್ ಕುಮಾರ್ ಮೀನಾ ತಿಳಿಸಿದ್ದಾರೆ.




















































