ಮಡಿಕೇರಿ : ಜೇನುಗೂಡಿನ ಬೇಲಿಗಳನ್ನು ನಿರ್ಮಿಸುವ ಮೂಲಕ ಆನೆ-ಮಾನವ ನಡುವಿನ ಸಂಘರ್ಷವನ್ನು ತಡೆಯಲು ಸಾಧ್ಯವಿದೆಯೆಂದು ಕೇಂದ್ರ ಸರ್ಕಾರದ ಖಾದಿ ಮತ್ತು ಗ್ರಾಮೋದ್ಯೋಗ ಅಭಿವೃದ್ಧಿ ಆಯೋಗದ (ಕೆ.ವಿ.ಐ.ಸಿ) ಗೌರವಾಧ್ಯಕ್ಷ ವಿನಯ್‍ಕುಮಾರ್ ಸಕ್ಸೇನ ಮಾಹಿತಿ ನೀಡಿದ್ದಾರೆ.
ಕೊಡಗು ಜಿಲ್ಲೆಯ ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದಲ್ಲಿ ನಡೆದ ಕಾರ್ಯಕ್ರಮವನ್ನು ಗಾಂಧಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಉದ್ಘಾಟಿಸಿ ಮಾಹಿತಿ ನೀಡಿದ ಅವರು, ಈಗಾಗಲೇ ಈ ಯೋಜನೆಯನ್ನು ಜಾರಿಗೊಳಿಸಲು ಚಿಂತನೆ ಹರಿಸಲಾಗಿದೆ ಎಂದರು.
ಪ್ರಾರಂಭಿಕವಾಗಿ ಆನೆಗಳು ಹೆಚ್ಚು ಸಮಸ್ಯೆಯನ್ನು ಉಂಟುಮಾಡುವ ಪ್ರದೇಶಗಳನ್ನು ಆಯ್ಕೆ ಮಾಡಿ ಅಂತಹ ಪ್ರದೇಶಗಳಲ್ಲಿ ಜೇನುಗೂಡು ಭೇಲಿ ನಿರ್ಮಿಸುವ ವಿನೂತನ ತಂತ್ರವನ್ನು ರೂಪಿಸಲಾಗಿದೆ. ಕೊಡಗು ಜಿಲ್ಲೆಯ ಚೇಳೂರು ಗ್ರಾಮದ ಸುತ್ತಮುತ್ತಲಿನ ನಾಲ್ಕು ಸ್ಥಳಗಳನ್ನು ಪ್ರಾಯೋಗಿಕವಾಗಿ ಆಯ್ಕೆ ಮಾಡಲಾಗಿದ್ದು ಈ ಯೋಜನೆಯನ್ನು ಅನುಷ್ಠಾನಕ್ಕೆ ತರಲಾಗುವುದು ಎಂದು ಅವರು ತಿಳಿಸಿದ್ದಾರೆ.
ಈ ಯೋಜನೆಯಿಂದ ಆನೆ ಮಾನವ ಸಂಘರ್ಷವನ್ನು ತಡೆಗಟ್ಟುವುದರ ಜೊತೆಗೆ ಜೇನುಕೃಷಿಗೆ ಸಹಕಾರಿಯಾಗುವ ಮೂಲಕ ರೈತನ ಆರ್ಥಿಕ ಸ್ಥಿತಿಯನ್ನು ಸುಧಾರಿಸಿಕೊಳ್ಳಬಹುದಾಗಿದೆ.
ಆದಿವಾಸಿಗಳ ಹಾಡಿ ಪ್ರದೇಶಗಳಲ್ಲಿ ಈ ಯೋಜನೆಯನ್ನು ಕಾರ್ಯರೂಪಕ್ಕೆ ತರುವ ಮೂಲಕ ಯೋಜನೆಯ ಫಲಶೃತಿಯನ್ನು ಕಂಡುಕೊಳ್ಳುವ ಚಿಂತನೆ ಹರಿಸಲಾಗಿದೆ. ಯೋಜನೆ ಫಲದಾಯಕ ಎಂದು ಕಾಣಲು ಆರು ತಿಂಗಳ ಕಾಲಾವಕಾಶವನ್ನು ನಿಗದಿಪಡಿಸಲಾಗಿದೆ ಎಂದು ಅವರು ಹೇಳಿದರು.
ಇದೇ ಸಂದರ್ಭ ಖಾದಿ ಮತ್ತು ಗ್ರಾಮಾಭಿವೃದ್ಧಿ ಆಯೋಗದಿಂದ ನಡೆಸಿದ ಜೇನು ಸಾಕಾಣಿಕೆ ತರಬೇತಿಯಲ್ಲಿ ಭಾಗವಹಿಸಿದ ರೈತರಿಗೆ ಜೇನುಪೆಟ್ಟಿಗೆ ಹಾಗೂ ಪ್ರಮಾಣ ಪತ್ರವನ್ನು ವಿತರಿಸಲಾಯಿತು.
ಖಾದಿ ಮತ್ತು ಗ್ರಾಮಾಭಿವೃದ್ಧಿ ಆಯೋಗದ ಉಪಕಾರ್ಯನಿರ್ವಹಣಾಧಿಕಾರಿ ಸತ್ಯನಾರಾಯಣ ಶುಕ್ಲ, ಹಾಗೂ ಅರಣ್ಯ ಮಹಾವಿದ್ಯಾಲಯದ ಮುಖ್ಯಸ್ಥ ಸಿ. ಜಿ. ಕುಶಾಲಪ್ಪ ಉಪಸ್ಥಿತರಿದ್ದರು. ಎನ್.ಆರ್.ಎಂ. ವಿಭಾಗದ ಮುಖ್ಯಸ್ಥ ಡಾ. ಜಿ.ಎಂ. ದೇವಗಿರಿ, ಎಸ್.ಎ.ಎಫ್ ವಿಭಾಗದ ಮುಖ್ಯಸ್ಥ ರಾಮಕೃಷ್ಣ ಹೆಗ್ಡೆ ಹಾಗೂ ಡಾ. ಕೆಂಚರೆಡ್ಡಿ ಸೇರಿದಂತೆ ರೈತರು ಹಾಗೂ ಪ್ರಾಧ್ಯಪಕರುಗಳು ಹಾಜರಿದ್ದರು.