ಬಾಗಲಕೋಟೆ: ಆಜಾನ್ ಮತ್ತು ಬಜನ್ ವಿಚಾರವಾಗಿ ಬಿಜೆಪಿ ಸರಕಾರವು ಜಾಣಮೌನದ ಲಾಭ ಪಡೆದು ಸಮಾಜಕ್ಕೆ ಬೆಂಕಿ ಇಡುವ ಕೆಲಸ ಮಾಡುತ್ತಿರುವ ಪ್ರಮೋದ್ ಮುತಾಲಿಕ್ ಅವರನ್ನು ಕೂಡಲೇ ಬಂಧಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಒತ್ತಾಯಿಸಿದ್ದಾರೆ.
ಬಾದಾಮಿಯಲ್ಲಿ ಜನತಾ ಜಲಧಾರೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಮುನ್ನ ಮಾಧ್ಯಮಗಳ ಜತೆ ಮಾತನಾಡಿದ ಅವರು, ಭಾವನಾತ್ಮಕ ವಿಷಯಗಳನ್ನಿಟ್ಟುಕೊಂಡು ಸಮಾಜದ ಶಾಂತಿ ಕದಡುತ್ತಿರುವವರನ್ನು ಮಟ್ಟ ಹಾಕಬೇಕು ಹಾಗೂ ಅಂಥವರಿಗೆ ಬೆಂಬಲ ನೀಡುವುದನ್ನು ಬಿಜೆಪಿ ಸರಕಾರ ನಿಲ್ಲಿಸಬೇಕು ಎಂದರು.
ಒಂದಲ್ಲಾ ಒಂದು ಭಾವನಾತ್ಮಕ ವಿಷಯ ಇಟ್ಟುಕೊಂಡು ನೆಮ್ಮದಿಯಾಗಿರುವ ಸರ್ವಜನಾಂಗದ ತೋಟವಾದ ಕರ್ನಾಟಕಕ್ಕೆ ದ್ವೇಷದ ಬೆಂಕಿ ಇಡುತ್ತಿರುವ ಪ್ರಮೋದ್ ಮುತಾಲಿಕ್ʼರನ್ನು ಮೊದಲು ಒದ್ದು ಒಳಗೆ ಹಾಕಬೇಕು. ಇಲ್ಲದಿದ್ದರೆ ರಾಜ್ಯದಲ್ಲಿ ಶಾಂತಿ ನೆಲೆಸಲು ಸಾಧ್ಯವಿಲ್ಲ ಎಂದು ಕುಮಾರಸ್ವಾಮಿ ಅವರು ಗುಡುಗಿದರು.
ಬಿಜೆಪಿ ಸರಕಾರದ ಮೌನದಿಂದ ರಾಜ್ಯದಲ್ಲಿ ಆಜಾನ್ ಮತ್ತಯ ಭಜನ್ ವಿಚಾರವಾಗಿ ಅಶಾಂತಿ ಉಂಟಾಗುತ್ತಿದೆ. ಈ ವಿಷಯಗಳು ದೊಡ್ಡದಾಗಿ ಬೆಳೆಯುತ್ತಿದ್ದರೂ ಸರಕಾರ ಮೌನವಾಗಿ ಶಾಂತಿ ಕದಡುವ ಶಕ್ತಿಗಳಿಗೆ ಉತ್ತೇಜನ ನೀಡುತ್ತಿದೆ. ಇದು ನಿಲ್ಲಬೇಕು. ಸಮಾಜವನ್ನು ಸಂಪೂರ್ಣವಾಗಿ ಹಾಳು ಮಾಡಿರೆ, ನಂತರ ಅದನ್ನು ರಿಪೇರಿ ಮಾಡಲು ಸಾದ್ಯವೇ? ಎಂದು ಅವರು ಖಾರವಾಗಿ ಪ್ರಶ್ನಿಸಿದರು.
ಸರ್ಕಾರ ಸುಪ್ರೀಂ ಕೋರ್ಟ್ ಆದೇಶ ಪಾಲಿಸಲಿ:
ಶ್ರೀರಾಮಸೇನೆ ಅಥವಾ ಬೇರೆ ಯಾವುದೇ ಸಂಘಟನೆ ಇರಲಿ, ಹನುಮಾನ್ ಚಾಲಿಸಾ ಅಥವಾ ಆಜಾನ್ʼಗಳ ಬಗ್ಗೆ ಸುಪ್ರೀಂ ಕೋರ್ಟ್ ಆದೇಶ ಏನಿದೆ? ಅದನ್ನು ಅರ್ಥ ಮಾಡಿಕೊಳ್ಳಬೇಕು ಹಾಗೂ ಪಾಲಿಸಬೇಕು. ಎಷ್ಟು ಪ್ರಮಾಣದಲ್ಲಿ ಶಬ್ದ ಇರಬೇಕು ಎಂಬುದನ್ನು ನ್ಯಾಯಾಲಯ ಸ್ಪಷ್ಟವಾಗಿ ಹೇಳಿದೆ. ಸರಕಾರ ಕೋರ್ಟ್ ಆದೇಶವನ್ನು ಜಾರಿ ಮಾಡಲಿ. ಆದರೆ, ಇವರು ಹಿಂದೂ ರಕ್ಷಕರ ವೇಷದಲ್ಲಿ ಕಾನೂನನ್ನು ಕೈಗೆತ್ತಿಕೊಳ್ಳುವುದು ಬೇಕಿಲ್ಲ. ಇಂಥ ವಿಷಯಗಳಿಗೆ ದೊಡ್ಡ ಪ್ರಚಾರವೂ ಅಗತ್ಯವಿಲ್ಲ. ಸುಖಾಸುಮ್ಮನೆ ಸಮಾಜದಲ್ಲಿ ಬೆಂಕಿ ಇಡುವ ಕೆಲಸವನ್ನು ಯಾರೂ ಮಾಡಬಾರದು ಎಂದು ಕುಮಾರಸ್ವಾಮಿ ಅವರು ಕಿಡಿಕಾರಿದರು.
ರಾಜ್ಯದಲ್ಲಿ ರೈತರ ಸಮಸ್ಯೆಗಳು ಸಾಕಷ್ಟಿವೆ, ಆದರೆ ಅವುಗಳ ಬಗ್ಗೆ ಯಾರೂ ಮಾತಾಡುತ್ತಿಲ್ಲ. ನಾನು ಬೆಳಗ್ಗೆ ಪತ್ರಿಕೆಯಲ್ಲಿ ಓದುತಿದ್ದೆ, ರೈತರಿಗೆ ಬೆಳೆವಿಮೆ ಹಣ ಇನ್ನೂ ಕೊಟ್ಟಿಲ್ಲ. ಅವರ ಸಮಸ್ಯೆಗಳ ಪರಿಹಾರಕ್ಕೆ ಕ್ರಮ ಕೈಗೊಳ್ಳದೇ ಕೆಲಸಕ್ಕೆ ಬಾರದ ವಿಷಯಗಳನ್ನು ಇವರೆಲ್ಲರೂ ಮುಂಚೂಣಿಗೆ ತರುತ್ತಿದ್ದಾರೆ. ಇವುಗಳನ್ನು ಸರಿಪಡಿಸಲು ಸಂಘಟನೆಗಳು ಹೋರಾಟ ಮಾಡಬೇಕು. ಅದರ ಹೊರತಾಗಿ ಇಂಥ ಬೆಂಕಿ ಇಡುವ ಕೆಲಸಗಳನ್ನು ಮಾಡಿದರೆ ರೈತರ ಸಮಸ್ಯೆಗಳು ಬಗೆಹರಿಯುವುದಿಲ್ಲ ಎಂದರು ಅವರು.
ಬಿಜೆಪಿ ಪಕ್ಷದ ಕೆಲ ದಲ್ಲಾಳಿಗಳು ಕೇಂದ್ರದಲ್ಲಿ ಹಣದ ವ್ಯವಹಾರಗಳ ಮೂಲಕ ಅಧಿಕಾರವನ್ನು ಬಿಕರಿ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಸರಕಾರ ರಚನೆ ಆಗಿದ್ದು ಹೇಗೆ? ಯಾವ ರೀತಿ ಅಧಿಕಾರ ನಡೆಸುತ್ತಿದ್ದಾರೆ ಇವರು ಎಂಬುದನ್ನು ಇಡೀ ರಾಜ್ಯದ ಜನ ನೋಡುತ್ತಿದ್ದಾರೆ. ಲೂಟಿ ಮಾಡಿದ ಪಾಪದ ಹಣದ ಮುಖಾಂತರ ಕೆಲ ಶಾಸಕರನ್ನು ಖರೀದಿ ಮಾಡಿ ಸರಕಾರ ಮಾಡಿದ್ದಾರೆ. ಇದೇನು ಪರಿಶುದ್ಧ ಮತು ಪಾರದರ್ಶಕ ಸರಕಾರವೇ? ಎಂದು ಅವರು ಖಾರವಾಗಿ ಪ್ರಶ್ನೆ ಮಾಡಿದರು.
ಇವರು ಜನಾದೇಶದಿಂದ ಬಂದವರಾ? ಇಲ್ಲ, ಲೂಟಿಯ ಹಣದಿಂದ ಅಧಿಕಾರಕ್ಕೆ ಬಂದವರು. ಇಲ್ಲಿ ಲೂಟಿ ಮಾಡಿದ ಹಣವನ್ನು ದೆಹಲಿಗೂ ಕಳಿಸುತ್ತಿದ್ದಾರೆ. ಇದು ಭ್ರಷ್ಟ ಜನರ ಸರಕಾರ. ಆಲಿ ಬಾಬಾ ಮತ್ತು 40 ಕಳ್ಳರು ಇರುವ ಸಚಿವ ಸಂಪುಟದ ಸರಕಾರ ಇದು ಎಂದು ಹೆಚ್‍ಡಿಕೆ ಟೀಕಿಸಿದರು.
ಕುಮಾರಸ್ವಾಮಿ ಬಳಿ ದಾಖಲೆ ಇದ್ದರೆ ಕೊಡಲಿ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳುತ್ತಾರೆ. ಆದರೆ ನಾನು 2008ರಿಂದ ಟನ್ʼಗಟ್ಟಲೇ ದಾಖಲೆ ಕೊಟ್ಟಿದ್ದೇನೆ. ಆದರೆ, ಆ ದಾಖಲೆಗಳಿಂದ ಯಾರು ಯಾರು ಎಷ್ಟು ಹಣ ಮಾಡಿಕೊಂಡು, ದಾಖಲೆಗಳನ್ನು ಮುಚ್ಚಿಹಾಕಿದರು ಎನ್ನುವುದು ನನಗೆ ಗೊತ್ತಿದೆ. ನಾನು 2008ರಲ್ಲಿ ದಾಖಲೆಗಳನ್ನು ಬಿಡುಗಡೆ ಮಾಡಿದ್ದಕ್ಕೆ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟರು ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಅರ್ಕಾವತಿ ರೀಡೂ ದಾಖಲೆ ಬಿಡುಗಡೆ ಮಾಡಿದರೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಜೈಲಿಗೆ ಹೋಗುತ್ತಾರೆ ಎಂದು ಬಿಜೆಪಿ ಅಧ್ಯಕ್ಷ ನಳೀನ್ ಕುಮಾರ್ ಕಟೀಲ್ ಹೇಳುತ್ತಾರೆ. ನಾಚಿಕೆಯಾಗಬೇಕು ಅವರಿಗೆ, ಆ ದಾಖಲೆಗಳನ್ನು ಇಟ್ಟುಕೊಂಡು ಗಂಟೆ ಹೊಡೆಯುತ್ತಿದ್ದಾರೆ ಅವರು. ಈ ಸರಕಾರಕ್ಕೂ ನಾಚಿಕೆ ಎನ್ನುವುದಿಲ್ಲ. ದೈರ್ಯವಿದ್ದರೆ ಆ ದಾಖಲೆಗಳನ್ನು ಬಿಡುಗಡೆ ಮಾಡಿ. ಇಬ್ಬರು ಹೊರಗೆ ಡಬ್ಬಾ ಇಟ್ಟುಕೊಂಟು ಡಬಡಬಡಬ ಎಂದು ಹೊಡೆಕೊಂಡು ಕೂತಿದ್ದಾರೆ. ಇವರಿಬ್ಬರೂ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ ಎಂದು ಕಾಂಗ್ರೆಸ್-ಬಿಜೆಪಿ ಪಕ್ಷಗಳನ್ನು ಕುಮಾರಸ್ವಾಮಿ ಅವರು ತರಾಟೆಗೆ ತೆಗೆದುಕೊಂಡರು.
ನಿಖರವಾಗಿ ಪಿಎಸ್‌ಐ ಅಕ್ರಮದ ತನಿಖೆ ಮಾಡಲು ಸರಕಾರಕ್ಕೆ ಧೈರ್ಯ ಇಲ್ಲ. ಒಬ್ಬ ಇನಸ್ಪೆಕ್ಟರ್, ಡಿವೈಎಸ್ಪಿಯನ್ನು ಬಂಧಿಸಿದ್ದಾರೆ, ಇನ್ನೂ 15 ದಿನಗಳಲ್ಲಿ ತನಿಖೆ ಮುಗಿಸಿ ತಿಪ್ಪೆ ಸಾರಿಸಿ ಮುಚ್ಚುತ್ತಿದ್ದಾರೆ. ಸರಕಾರಕ್ಕೆ ಮಾನ, ಮರ್ಯಾದೆ ಇದ್ದರೆ ನಿಖರ, ಪಾರ್ದರ್ಶಕ ತನಿಖೆ ನಡೆಸಲಿ. ರಾಜ್ಯ ಸರಕಾರ ಉರಳಿದರೂ ಪರವಾಗಿಲ್ಲ, ನಾವು ಪಿಎಸ್‌ಐ ತನಿಖೆ ನಡೆಸಿ ಕ್ರಮ ಕೈಗೊಳುತ್ತೇವೆ ಎನ್ನುತ್ತಾರೆ. ಆ ಕಿಂಗ್ʼಪಿನ್ʼನನ್ನು ಹಿಡಿಯುವ ಧೈರ್ಯ ಅವರಿಗಿದೆಯಾ? ಎಂದು ಕುಮಾರಸ್ವಾಮಿ ಸರಕಾರವನ್ನು ಪ್ರಶ್ನಿಸಿದರು.
ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರಿಗಳನ್ನು ಗುಲಾಮರನ್ನಾಗಿ ಮಾಡಿಕೊಂಡಿದೆ. ಅಬಕಾರಿ ಡೀಸಿ ಮತ್ತು ಪೊಲೀಸ್ ಇಲಾಖೆಯನ್ನು ಯಾವ ರೀತಿ ನಡೆಸಿಕೊಂಡಿದೆ ಎಂಬುದು ನೋಡಿದ್ದೇವೆ. ಅಧಿಕಾರಿಗಳು ಚುನಾವಣೆಗೆ ಕಾಯುತ್ತಿದ್ದಾರೆ, ಚುನಾವಣೆ ಬರಲಿ. ಇವರನ್ನು ಗಂಟುಮೂಟೆ ಕಟ್ಟಿ ಕಳಿಸುತ್ತಾರೆ ಎಂದು ಸರಕಾರದ ವೈಫಲತ್ಯೆಯನ್ನು ಎತ್ತಿಹಿಡಿದಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿಗಳು ಕಿಡಿಕಾರಿದರು.
ಈಗ ಸಲ ಜೆಡಿಎಸ್ ಸ್ವತಂತ್ರವಾಗಿ ಅಧಿಕಾರಕ್ಕೆ ಬರುತ್ತದೆ. 1994ರಲ್ಲಿ ಬಿಜೆಪಿ ಶಕ್ತಿಯುತವಾಗಿರಲಿಲ್ಲ, ಆಗ ನಾವು 104 ಸ್ಥಾನಗಳನ್ನು ಗೆದಿದ್ದೆವು. ಉತ್ತರ ಕರ್ನಾಟಕದಲ್ಲಿ 38, ಹಳೇ ಮೈಸೂರು ಕರ್ನಾಟಕದಲ್ಲಿ 79 ಸ್ಥಾನಗಳಲ್ಲಿ ನಮ್ಮ ಅಭ್ಯರ್ಥಿಗಳು ಗೆದಿದ್ದರು. ಈಗಲೂ ಉತ್ತರ ಕರ್ನಾಟಕದಲ್ಲಿ 40 ಸ್ಥಾನಗಳಲ್ಲಿ ನಮ್ಮ ಅಭ್ಯರ್ಥಿಗಳು ಗೆಲ್ಲುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.