ಹುಬ್ಬಳ್ಳಿ: ಭಾರೀ ಮಳೆ, ಭೂಕುಸಿತ ಘಟನೆಗಳಿಂದಾಗಿ ಪವಿತ್ರ ಅಮರನಾಥ ಯಾತ್ರಿಗಳು ಮಾರ್ಗ ಮಧ್ಯೆ ಸಿಲುಕಿದ್ದಾರೆ. 1,000 ಕ್ಕೂ ಹೆಚ್ಚು ಯಾತ್ರಿಗಳು ಸಿಲುಕಿಕೊಂಡಿದ್ದು, ಇವರಲ್ಲಿ 80ಕ್ಕೂ ಹೆಚ್ಚು ಮಂದಿ ಕರ್ನಾಟಕದವರೂ ಇದ್ದಾರೆ ಎಂದು ಹೇಳಲಾಗುತ್ತಿದೆ.
ಸಂದಿಗ್ಧ ಸ್ಥಿತಿಯಲ್ಲಿರುವ ಇವರು ಅಮರನಾಥದ ಪಂಚತಾರ್ನಿ ಸೇನಾ ಶಿಬಿರಗಳಲ್ಲಿ ತಾತ್ಕಾಲಿಕ ಆಶ್ರಯ ಪಡೆದಿದ್ದು ರಾಜ್ಯ ಸರ್ಕಾರ ಇವರ ನೆರವಿಗೆ ಧಾವಿಸಿದೆ.
ಅಮರನಾಥ ಯಾತ್ರೆಗೆ ತೆರಳಿರುವ ಗದಗ್ ಮೂಲದ ಸುಮಾರು 23 ಮಂದಿ ಕೂಡಾ ಮಾರ್ಗಮಧ್ಯೆ ಸಿಲುಕಿದ್ದಾರೆ ಎನ್ನಲಾಗಿದೆ. ಸಂಕಷ್ಟಕ್ಕೆ ಸಿಲುಕಿಕೊಂಡಿರುವವರ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ವಿಡಿಯೋ ಕಳುಹಿಸಿ ತಮ್ಮ ಸಂಕಷ್ಟ ತೋಡಿಕೊಂಡಿದ್ದಾರೆ ಎನ್ನಲಾಗಿದೆ.
ಗದಗದಿಂದ ಜುಲೈ 4 ರಂದು ಯಾತ್ರೆಗೆ ತೆರಳಿದ್ದ ಈ ತಂಡ ಜುಲೈ 6 ರಂದು ಅಮರನಾಥ ತಲುಪಿತ್ತು ಎನ್ಬಲಾಗಿದ್ದು, ಬಳಿಕ ಸರಣಿ ಭೂಕುಸಿತದಿಂದಾಗಿ ಈ ಯಾತ್ರಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ ಎನ್ನಲಾಗಿದೆ.
ಈ ನಡುವೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆಯಂತೆ ರಾಜ್ಯದ ತಂಡ ಅಮರನಾಥ ಯಾತ್ರೆ ಕೈಗೊಂಡಿರುವ ಕನ್ನಡಿಗರ ರಕ್ಷಣೆಗೆ ಧಾವಿಸಿದೆ. ಪಿ ಸುನೀಲ್ ಕುಮಾರ್ ನೇತೃತ್ವದಲ್ಲಿ ಅಧಿಕಾರಿಗಳ ತಂಡ ಉತ್ತರಾಖಂಡಕ್ಕೆ ತೆರಳಿ ಈ ಯಾತ್ರಿಗಳಿಗೆ ನೆರವು ನೀಡಲಿದೆ.