ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಮ್ಮ ಕ್ಷೇತ್ರದಲ್ಲಿ ಭಾವನಾತ್ಮಕವಾಗಿ ಮಾತನಾಡಿದ್ದು, ಅದು ಸಹಜ. ನಾನು ಕೂಡ ನನ್ನ ಕ್ಷೇತ್ರದಲ್ಲಿ ಸಾಮಾನ್ಯ ಕಾರ್ಯಕರ್ತ. ನಮ್ಮ ಜನರ ಎದುರು ನಮ್ಮ ಅಧಿಕಾರ ತೋರಲು ಆಗುವುದಿಲ್ಲ. ಹೀಗಾಗಿ ಅವರ ಹೇಳಿಕೆಯಲ್ಲಿ ತಪ್ಪಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೊಮ್ಮಾಯಿ ಅವರು ಸಿಎಂ ಸ್ಥಾನದಿಂದ ಬದಲಾಗುತ್ತಾರೆ. ನಿರಾಣಿ ಅವರು ಮುಖ್ಯಮಂತ್ರಿ ಆಗ್ತಾರೆ ಎಂಬ ಸಚಿವ ಈಶ್ವರಪ್ಪ ಅವರ ಹೇಳಿಕೆಯಿಂದಾಗಿ ನಾಯಕತ್ವ ಬದಲಾವಣೆ ವಿಚಾರದಲ್ಲಿ ಗೊಂದಲ ಸೃಷ್ಟಿಯಾಗಿದೆ ಎಂದರು.
ಭಾನುವಾರ ಮುಖ್ಯಮಂತ್ರಿಗಳು ತಮ್ಮ ಜನರ ಮುಂದೆ ಭಾವನಾತ್ಮಕವಾಗಿ ಮಾತನಾಡಿದ್ದಾರೆ. ನಿರಾಣಿ ಅವರು ಅದೇ ವೇದಿಕೆಯಲ್ಲಿ ಬೊಮ್ಮಾಯಿ ಅವರು ಕೇಂದ್ರ ಸಚಿವರಾಗುತ್ತಾರೆ ಎಂದು ಹೇಳುತ್ತಾರೆ. ರಾಜ್ಯದಲ್ಲಿ ಯಾವ ಅಧಿಕಾರಿಗಳು ಸಿಎಂ ಮಾತು ಕೇಳುತ್ತಿಲ್ಲ. ಸುವರ್ಣಸೌಧದ ಕಾರಿಡಾರ್ ಗಳಲ್ಲೇ ಸಚಿವರು ಸಿಎಂ ಬದಲಾಗುತ್ತಾರೆ ಎಂದು ಮಾತನಾಡಿಕೊಳ್ಳುತ್ತಿದ್ದಾರೆ. ಆಡಳಿತ ಕುಸಿತ ಕಂಡಿದೆ. ಬಿಜೆಪಿ ಎಷ್ಟಾದರೂ ಸಿಎಂಗಳನ್ನು ಬದಲಾವಣೆ ಮಾಡಿಕೊಳ್ಳಲಿ. ಯಡಿಯೂರಪ್ಪ ಅವರನ್ನೇ ಬೇಕಾದ್ರೆ ಮತ್ತೆ ಸಿಎಂ ಸ್ಥಾನದಲ್ಲಿ ಕೂರಿಸಲಿ. ನಮ್ಮ ಅಭ್ಯಂತರವಿಲ್ಲ ಎಂದರು.