ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತಿನ ವಿಶ್ರಾಂತ ಅಧ್ಯಕ್ಷ ಹಾಗೂ ಸಾಹಿತಿ ಪ್ರೊ. ಚಂದ್ರಶೇಖರ ಪಾಟೀಲ ಅವರ ನಿಧನಕ್ಕೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ.
ಕನ್ನಡಪರ ಹೋರಾಟಗಾರ, ಕವಿ, ನಾಟಕಕಾರ, ಸಂಘಟನಕಾರ, ಪತ್ರಕರ್ತ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ವಿಶ್ರಾಂತ ಅಧ್ಯಕ್ಷರು ಆಗಿದ್ದ ಶ್ರೀ ಚಂದ್ರಶೇಖರ ಪಾಟೀಲ ಅವರ ನಿಧನ ಬಹಳ ದುಃಖ ಉಂಟು ಮಾಡಿದೆ ಎಂದು ಮಾಜಿ ಮುಖ್ಯಮಂತ್ರಿಗಳು ಕಂಬನಿ ಮಿಡಿದಿದ್ದಾರೆ.
ಚಂಪಾ ಎಂದೇ ಸಾರಸ್ವತ ಲೋಕದಲ್ಲಿ ಹೆಸರಾಗಿದ್ದ ಅವರು ಸಾಹಿತ್ಯ ಕೃಷಿಯ ಜತೆಗೆ ನಾಡು, ನುಡಿ, ನೆಲಕ್ಕಾಗಿ ತಮ್ಮ ಬದುಕನ್ನು ಮೀಸಲಿಟ್ಟಿದ್ದರು. ಚಂಪಾ ಅವರ ಅಗಲಿಕೆ ನಾಡಿಗೆ ದೊಡ್ಡ ನಷ್ಟ. ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ ಹಾಗೂ ದುಃಖವನ್ನು ಭರಿಸುವ ಶಕ್ತಿ ಅವರ ಕುಟುಂಬದ ಸದಸ್ಯರು, ಅಭಿಮಾನಿಗಳಿಗೆ ಆ ಭಗವಂತ ನೀಡಲಿ ಎಂದು ಕುಮಾರಸ್ವಾಮಿ ಅವರು ಪ್ರಾರ್ಥಿಸಿದ್ದಾರೆ.