ಬೆಳಗಾವಿ: ದೇಶಕ್ಕಾಗಿ ತಮ್ಮ ಪ್ರಾಣವನ್ನೇ ಮುಡುಪಾಗಿಟ್ಟಿದ್ದ ಸಂಗೊಳ್ಳಿ ರಾಯಣ್ಣ ಹಾಗೂ ಛತ್ರಪತಿ ಶಿವಾಜಿ ಮಹರಾಜರ ವ್ಯಕ್ತಿತ್ವ ಆದರ್ಶ ಪ್ರಾಯ. ಇವರ ಹೆಸರಿನ ಮೇಲೆ ಸಮಾಜದ ಶಾಂತಿ ಕದಡುವವರ ಮೇಲೆ ಸರಕಾರ ಕಠಿಣ ಕ್ರಮ ತಗೆದುಕೊಳ್ಳುತ್ತದೆ ಎಂದು ಮುಜರಾಯಿ, ಹಜ್ ಮತ್ತು ವಕ್ಫ್ ಸಚಿವೆ ಶಶಿಕಲಾ ಜೊಲ್ಲೆ ಹೇಳಿದ್ದಾರೆ.
ನಿಪ್ಪಾಣಿಯಲ್ಲಿ ಪ್ರತಿಕ್ರಿಯೆ ನೀಡಿದ ಅವರು ಸಂಗೊಳ್ಳಿ ರಾಯಣ್ಣ ಅವರು ಬೆಳಗಾವಿ ಜಿಲ್ಲೆಯ ಸುಪುತ್ರಿ ಕಿತ್ತೂರಿನ ರಾಣಿಯ ಬಲಗೈ ಭಂಟರಾಗಿದ್ದರು. ರಾಜ್ಯದ ನೆಲಕ್ಕಾಗಿ, ಜಲಕ್ಕಾಗಿ ಹಾಗೂ ದೇಶಕ್ಕಾಗಿ ಪ್ರಾಣ ಮುಡಿಪಿಟ್ಟಿದ್ದರು. ಅದೇ ರೀತಿ ಛತ್ರಪತಿ ಶಿವಾಜಿ ಮಹಾರಾಜರು ಕೂಡಾ ದೇಶಕ್ಕಾಗಿ ತಮ್ಮ ಪ್ರಾಣವನ್ನ ಮುಡುಪಾಗಿಟ್ಟಿದ್ದಷ್ಟೇ ಅಲ್ಲದೆ ಎಲ್ಲರಿಗೂ ಸಮಾನತೆಯ ಹಕ್ಕು ಕೊಡುವ ಹೋರಾಟ ಮಾಡಿದ್ದರು. ಇಬ್ಬರ ವ್ಯಕ್ತಿತ್ವವೂ ಆದರ್ಶಪ್ರಾಯ. ಈ ಇಬ್ಬರೂ ವ್ಯಕ್ತಿಗಳ ಹೆಸರು ಉಪಯೋಗಿಸಿಕೊಂಡು ಸಮಾಜದ ಶಾಂತಿ ನೆಮ್ಮದಿಯನ್ನು ಕದಡುವ ಕೃತ್ಯವನ್ನು ಕೆಲವರು ಮಾಡಿದ್ದಾರೆ. ಈಗಾಗಲೇ ನಮ್ಮ ಪೊಲೀಸರು ಕೃತ್ಯವೆಸಗಿದವರನ್ನು ಬಂಧಿಸಿದ್ದಾರೆ ಎಂದರು.
ದುಷ್ಕೃತ್ಯ ಎಸಗಿದವರ ಮೇಲೆ ಕಠಿಣ ಕ್ರಮ ತಗೆದುಕೊಳ್ಳುವುದಾಗಿ ಈಗಾಗಲೇ ಮುಖ್ಯಮಂತ್ರಿಗಳು ಹಾಗು ಗೃಹ ಸಚಿವರು ಆದೇಶ ನೀಡಿದ್ದಾರೆ. ಇಂತಹ ಕೃತ್ಯ ಎಸಗಿದವರ ವಿರುದ್ದ ಕಠಿಣ ಕ್ರಮ ತಗೆದುಕೊಳ್ಳಬೇಕು ಎನ್ನುವುದು ನಮ್ಮ ಆಗ್ರಹವಾಗಿದೆ. ಶಾಂತಿ ಕದಡುವ ಹಾಗೂ ಸರಕಾರಿ ವಾಹನಗಳ ಜಖಂ ಮಾಡಿರುವುದು ಖಂಡನೀಯ. ಗಡಿ ಬಾಗದಲ್ಲಿ ಪ್ರೀತಿ ವಿಶ್ವಾಸದಿಂದ ನಾವು ಜೀವನ ಸಾಗಿಸುತ್ತಿದ್ದೇವೆ. ನಾಲ್ಕು ಜನರ ದುಷ್ಕೃತ್ಯದಿಂದ ಸಾಮರಸ್ಯ ಹದಗೆಡವುದು ಸರಿಯಲ್ಲ ಎಂದು ಹೇಳಿದರು.
ಇದೇ ವೇಳೆ ನಿಪ್ಪಾಣಿಯಲ್ಲಿ ಸಂಗೋಳ್ಳೀ ರಾಯಣ್ಣ ವೃತ್ತಕ್ಕೆ ಹಾಗೂ ಛತ್ರಪತಿ ಶಿವಾಜಿ ಅವರ ಪುತ್ತಳೀಗೆ ಮಾಲಾರ್ಪಣೆ ಮಾಡುವ ಮೂಲಕ ಸಾಮರಸ್ಯ ಕಾಪಾಡಿಕೊಳ್ಳುವ ಬಗ್ಗೆ ಕರೆ ನೀಡಿದರು.