ಬೆಂಗಳೂರು: ವಿಧಾನಪರಿಷತ್ ಸಭಾಪತಿ ಸ್ಥಾನಕ್ಕೆ ಹಾಗೂ ಪರಿಷತ್ ಸದಸ್ಯತ್ವಕ್ಕೆ ಬಸವರಾಜ ಹೊರಟ್ಟಿ ರಾಜೀನಾಮೆ ನೀಡಿದ್ದಾರೆ.
ಕೆಲವು ದಿನಗಳ ಹಿಂದೆ ರಾಜ್ಯ ಪ್ರವಾಸದಲ್ಲಿದ್ದ ಕೇಂದ್ರ ಸಚಿವ ಅಮಿತ್ ಷಾ ಅವರನ್ನು ಭೇಟಿಯಾಗಿದ್ದ ಹೊರಟ್ಟಿ ಅವರು ಬಿಜೆಪಿ ಸೇರ್ಪಡೆಯ ನಿರ್ಧಾರವನ್ನು ಪ್ರಕಟಿಸಿದ್ದರು. ಇದಾದ ಬೆನ್ನಲ್ಲೇ ಅವರು ಇಂದು ಸಭಾಪತಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಅಷ್ಟೇ ಅಲ್ಲ ಜೆಡಿಎಸ್ ತೊರೆಯುವ ಅವರ ತೀರ್ಮಾನ ಕುತೂಹಲಕಾರಿ ಬೆಳವಣಿಗೆಗೆ ಸಾಕ್ಷಿಯಾಗಿದೆ.
ಇದಕ್ಕೂ ಮುನ್ನ ವಿಧಾನಸೌಧದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಬಸವರಾಜ ಹೊರಟ್ಟಿ, ಜೆಡಿಎಸ್ ತೊರೆಯುವ ನಿರ್ಧಾರದ ಬಗ್ಗೆಯೂ ಮಾಹಿತಿ ಹಂಚಿಕೊಂಡರು. ‘ನನಗೆ ದೇವೇಗೌಡರ ಬಗ್ಗೆ ಯಾವುದೇ ಅಸಮಾಧಾನವಿಲ್ಲ. ಅವರ ಬಳಿಗೆ ಹೋಗಿ ಮಾತನಾಡಲು ಧೈರ್ಯವಾಗಲಿಲ್ಲ. ಹಾಗಾಗಿ ಪತ್ರ ಬರೆದಿದ್ದೇನೆ’ ಎಂದರು. ಪ್ರಸಕ್ತ ಪರಿಸ್ಥಿತಿ ನೋಡಿದರೆ ರಾಜಕೀಯದಲ್ಲಿರಬಾರದು ಎಂದೆನಿಸುತ್ತದೆ ಎಂದವರು ಹೇಳಿದ ವೈಖರಿಯೂ ಪರಿಸ್ಥಿತಿಗೆ ಹಿಡಿದ ಕನ್ನಡಿಯಂತಿತ್ತು.
ತಾವು ಯಾವುದೇ ಪಕ್ಷದಿಂದ ಸ್ಪರ್ಧಿಸಿದರೂ ಗೆಲ್ಲುತ್ತೇನೆಂಬ ವಿಶ್ವಾಸವಿದೆ. ಆದರೂ ಪಕ್ಷದ ಜೊತೆ ಗುರುತಿಸುವ ಅನಿವಾರ್ಯತೆಯೂ ಇದೆ ಎಂದರು.