ಬೆಂಗಳೂರು: ಕೇಂದ್ರ ಮತ್ತು ರಾಜ್ಯದ ಬಿಜೆಪಿ ಸರಕಾರಗಳು ರೈತಪರ ಮತ್ತು ಜನಪರವಾಗಿ ಕೆಲಸ ಮಾಡುತ್ತಿವೆ ಎಂದು ಬಿಜೆಪಿ ರಾಷ್ಟ್ರೀಯ ಸಂಸದೀಯ ಮಂಡಳಿ ಸದಸ್ಯರು, ಮಾಜಿ ಮುಖ್ಯಮಂತ್ರಿಗಳು ಹಾಗೂ ರೈತ ನಾಯಕರಾದ ಬಿ.ಎಸ್. ಯಡಿಯೂರಪ್ಪ ಅವರು ತಿಳಿಸಿದರು.
ಬೆಳಗಾವಿ ನಗರದ ಮಯೂರ ಪ್ರೆಸಿಡೆನ್ಸಿ ಕ್ಲಬ್‍ನಲ್ಲಿ ಎರಡು ದಿನಗಳ ಕಾಲ ನಡೆಯಲಿರುವ ಬಿಜೆಪಿ ರೈತ ಮೋರ್ಚಾದ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯನ್ನು ಇಂದು ಉದ್ಘಾಟಿಸಿ ಅವರು ಮಾತನಾಡಿದರು. ಈ ವರ್ಷ ಕರ್ನಾಟಕದಲ್ಲಿ ಅಸೆಂಬ್ಲಿ ಚುನಾವಣೆ ನಡೆಯಲಿದ್ದು, ಇದು ಅತ್ಯಂತ ಮಹತ್ವದ ಸಭೆ ಎಂದು ಅವರು ತಿಳಿಸಿದರು.
ನಾನು ರೈತರ ಸಮಸ್ಯೆಗಳ ಪರಿಹಾರಕ್ಕಾಗಿ ಕಳೆದ 5 ದಶಕಗಳಿಂದ ಹೋರಾಟ ಮಾಡುತ್ತಿದ್ದೇನೆ ಎಂದ ಅವರು, ತಾವು ರೈತರಿಗಾಗಿ ಬಜೆಟ್ ಮಂಡಿಸಿದ್ದನ್ನು ನೆನಪಿಸಿದರು. ಕಿಸಾನ್ ಸಮ್ಮಾನ್ ನಿಧಿಯಡಿ ಕೇಂದ್ರದ 6 ಸಾವಿರ ರೂಪಾಯಿ ಜೊತೆಗೆ ರಾಜ್ಯದಿಂದ 4 ಸಾವಿರ ನೀಡುವುದನ್ನು ಆರಂಭಿಸಿದ್ದಾಗಿ ಅವರು ವಿವರಿಸಿದರು. ರಾಜ್ಯದಲ್ಲಿ ಮನೆಮನೆಗೆ ನಳ್ಳಿನೀರಿನ ಯೋಜನೆಯನ್ನು ಜಾರಿಗೊಳಿಸಿದ್ದು, ರೈತ ವಿದ್ಯಾನಿಧಿ ಯೋಜನೆ ಅನುಷ್ಠಾನವನ್ನು ನೆನಪಿಸಿದ ಅವರು, ಬಿಜೆಪಿ ಸದಾ ಜನಪರವಾಗಿದೆ. ರೈತರ ಪರವಾಗಿದೆ ಎಂದು ತಿಳಿಸಿದರು. ದೇಶವು ವಿಶ್ವದ 5ನೇ ಬೃಹತ್ ಅರ್ಥವ್ಯವಸ್ಥೆಯನ್ನು ಹೊಂದಿರುವುದರ ಹಿಂದೆ ಪ್ರಧಾನಿ ನರೇಂದ್ರ ಮೋದಿಜಿ ಮತ್ತು ಕೇಂದ್ರ ಸರಕಾರ ವಹಿಸಿದ ಶ್ರಮವನ್ನು ಅವರು ಮೆಚ್ಚಿಕೊಂಡರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರಾಷ್ಟ್ರೀಯ ರೈತ ಮೋರ್ಚಾದ ಅಧ್ಯಕ್ಷ ರಾಜಕುಮಾರ ಚಹರ್ ಅವರು ಮಾತನಾಡಿ, ರಾಜ್ಯದ ರೈತ ಮೋರ್ಚಾವು ಅತ್ಯುತ್ತಮವಾಗಿ ಕೆಲಸ ಮಾಡುತ್ತಿದೆ ಎಂದು ಮೆಚ್ಚುಗೆ ಸೂಚಿಸಿದರು. ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಭಾರತವು ವಿಶ್ವಗುರು ಆಗುವ ನಿಟ್ಟಿನಲ್ಲಿ ಮುನ್ನಡೆಯುತ್ತಿದೆ ಎಂದು ತಿಳಿಸಿದರು.
370ನೇ ವಿಧಿ ರದ್ದು ಮಾಡಿ, ರಾಮಮಂದಿರವನ್ನು ಅಯೋಧ್ಯೆಯಲ್ಲೇ ನಿರ್ಮಿಸಿ ಎಂದು ನಾವು ಹಿಂದೆ ಘೋಷಣೆ ಕೂಗುತ್ತಿದ್ದೆವು. ಆ ಘೋಷಣೆಗಳು ಇದೀಗ ಜಾರಿಯಾಗಿವೆ ಎಂದು ಸಂತಸ ಸೂಚಿಸಿದರು. 370ನೇ ವಿಧಿ ರದ್ದು ಮಾಡಲು ಮೋದಿಜಿ ಮತ್ತು ಅಮಿತ್ ಶಾ ಅವರು ಕಾರಣಕರ್ತರಾಗಿದ್ದಾರೆ. ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ನಿರ್ಮಾಣವೂ ನಡೆದಿದೆ ಎಂದು ವಿವರಿಸಿದರು. ಬಿಜೆಪಿಯ ರೈತಪರ ಕೆಲಸಗಳನ್ನು ಜನರಿಗೆ ತಿಳಿಸುವ ಕೆಲಸವನ್ನು ನಾವು ಮಾಡಬೇಕಿದೆ ಎಂದು ತಿಳಿಸಿದರು.
ರಾಜ್ಯಸಭಾ ಸದಸ್ಯ ಹಾಗೂ ರಾಜ್ಯ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಈರಣ್ಣ ಕಡಾಡಿ ಅವರು ಮಾತನಾಡಿ, ಮೋರ್ಚಾದ ಎಲ್ಲ ಪದಾಧಿಕಾರಿಗಳನ್ನು ವೀರಭೂಮಿ ಬೆಳಗಾವಿಗೆ ಸ್ವಾಗತಿಸಿದರು. ರೈತರ ಅಭಿವೃದ್ಧಿಗಾಗಿ ನಮ್ಮ ಕೇಂದ್ರ ಮತ್ತು ರಾಜ್ಯ ಸರಕಾರಗಳು ನಿರಂತರವಾಗಿ ಶ್ರಮಿಸುತ್ತಿವೆ ಎಂದು ಅವರು ವಿವರಿಸಿದರು. ಕೋವಿಡ್ ಮಹಾಮಾರಿಯ ಸಂದರ್ಭದಲ್ಲೂ ದೇಶವು ವಿಕಾಸದ ಪ್ರಮಾಣದಲ್ಲಿ ಕುಸಿತ ಆಗಲಿಲ್ಲ. ಇದು ಮೋದಿಜಿ ಅವರ ದೂರದೃಷ್ಟಿಯಿಂದ ಸಾಧ್ಯವಾಗಿದೆ ಎಂದು ತಿಳಿಸಿದರು.
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಸಚಿವರಾದ ಶಶಿಕಲಾ ಜೊಲ್ಲೆ, ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್, ಸಂಸದರಾದ ಮಂಗಲಾ ಅಂಗಡಿ, ಮೋರ್ಚಾ ಪದಾಧಿಕಾರಿಗಳು, ಅಪೇಕ್ಷಿತರು ಭಾಗವಹಿಸಿದ್ದರು.