ಮೈಸೂರು: ರೈತನ ಆದಾಯ ಹೆಚ್ಚಿಸುವ ಸಲುವಾಗಿ ಹೊಸ ನಿರ್ದೇಶನಾಲಯವನ್ನು ಸ್ಥಾಪಿಸಲಾಗುತ್ತಿದೆ. ಈ ಮೂಲಕ ರೈತರ ಆದಾಯಕ್ಕೆ ಬೇಕಾದ ಸಮಗ್ರ ಕೃಷಿ, ಇತರ ಕೃಷಿ ಚಟುವಟಿಕೆಗಳ ಚಿಂತನೆ ಮಾಡಲಾಗುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಎಸ್. ಬೊಮ್ಮಾಯಿ ಅವರು ಹೇಳಿದ್ದಾರೆ.
ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಹಾಗೂ ರಾಜ್ಯ ಕಬ್ಬು ಬೆಳೆಗಾರರ ಸಂಘದ ಸಹಯೋಗದಲ್ಲಿ ವಿಶ್ವ ರೈತ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ರಾಜ್ಯ ಮಟ್ಟದ ಸಮಾವೇಶ, ಕುರುಬೂರು ಶಾಂತಕುಮಾರ್ ಅವರಿಗೆ ಅಭಿನಂದನಾ ಸಮಾರಂಭ ಹಾಗೂ ರೈತಧ್ವನಿ ವಿಶೇಷಾಂಕ ಮತ್ತು ಹಸಿರು ಹೊನ್ನು ಸ್ಮರಣ ಸಂಚಿಕೆ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, ಸರ್ಕಾರಗಳು ಆಹಾರ ಉತ್ಪಾದನೆ ಕಡೆಗೆ ಗಮನಕೊಟ್ಟಿವೆ. ಆದರೆ ರೈತರ ಆರ್ಥಿಕ ಅಭಿವೃದ್ಧಿಗೆ ಗಮನಕೊಟ್ಟಿಲ್ಲ. ಈ ಸಮಸ್ಯೆ ನಮ್ಮ ಗಮನದಲ್ಲಿದೆ. ಕೃಷಿ ಜೊತೆಗೆ ಪೂರಕ ಕೃಷಿ ಚಟುವಟಿಕೆ ಹಾಗೂ ಸಮಗ್ರ ಕೃಷಿ ಪದ್ಧತಿ ಅಳವಡಿಕೆಯಿಂದ ರೈತರ ಆದಾಯ ಹೆಚ್ಚಿಸಲು ಸಾಧ್ಯ ಎಂದರು.
ಕೃಷಿ ಉತ್ಪಾದನೆಗೆ ಸಂಶೋಧನೆ ಇದೆ, ಬೀಜಗಳಿವೆ, ಗೊಬ್ಬರ ಇವೆ. ಕೃಷಿ ಉತ್ಪಾದನೆಗಳ ಜೊತೆಗೆ ನಮ್ಮ ಯೋಚನೆ ಮತ್ತು ಯೋಜನೆ ರೈತರ ಬದುಕಿನ ಕಡೆಗೆ ಇರಬೇಕು. ಆತನ ಆರ್ಥಿಕ ಸ್ಥಿತಿ ಉತ್ತಮಗೊಂಡರೆ ಕೃಷಿ ತಂತಾನೆ ಬೆಳೆಯುತ್ತದೆ ಎಂದರು.
ಎಲ್ಲಾ ರಾಜಕೀಯ ಪಕ್ಷಗಳು ರೈತರಿಗೆ ಸೇರಿವೆ ಎಂಬ ವಾಸ್ತವವನ್ನು ತಿಳಿದುಕೊಂಡರೆ ರೈತರಿಗೆ ರಾಜಕೀಯ ಪಕ್ಷಗಳು ಬೆನ್ನೆಲುಬು ಆಗುತ್ತವೆ. ಈ ಕಟು ಸತ್ಯ ತಿಳಿದುಕೊಳ್ಳಲು 75 ವರ್ಷವಾದರೂ ಸಾಧ್ಯವಾಗಿಲ್ಲ. ಚಳವಳಿ ಮತ್ತು ರಾಜಕಾರಣದ ನಡುವೆ ಒಂದು ಸಂಬಂಧ ಇರಬೇಕಾಗಿತ್ತು ಎಂದು ಹೇಳಿದರು.
ಇಂದು ಆಹಾರ ಉತ್ಪನ್ನ ಮಾರಾಟಗಾರರ ಜೇಬು ತುಂಬಿದೆ. ಆದರೆ ಆಹಾರ ಉತ್ಪಾದಕರ ಜೇಬು ಖಾಲಿ ಇದೆ. ಎಲ್ಲಿಯ ವರೆಗೆ ಈ ಸತ್ಯ ಆಡಳಿತದ ಕೇಂದ್ರಬಿಂದು ಆಗುವುದಿಲ್ಲವೊ ಅಲ್ಲಿವರೆಗೂ ಕೆಲವು ರಿಯಾಯಿತಿಗಳನ್ನು ಕೊಡುತ್ತಾ ಹೋಗುತ್ತವೆ, ಸಮಸ್ಯೆ ಬಗೆಹರಿಯುವುದಿಲ್ಲ ಎಂದರು.
ಆಹಾರ ಉತ್ಪಾದನೆ ಹೆಚ್ಚಾದರೂ ಕಷ್ಟ, ಕಡಿಮೆಯಾದರೂ ಕಷ್ಟ. ಬೇರೆ ಬೇರೆ ಸಂಶೋಧನೆಯಿಂದ ಹೊಸ ಹೊಸ ತಳಿಗಳು ಬರುತ್ತವೆ. ಒಂದು ತಳಿ ಬಿತ್ತಿ, ಬೆಳೆದು ನಿಭಾಯಿಸಿ ಸುಸ್ತಾಗಿ ಅದರ ಆಳ ಅಗಲ ತಿಳಿಯುವ ವೇಳೆಗೆ ಇನ್ನೊಂದು ತಳಿ ಬಂದಿರುತ್ತದೆ. ಯಾವುದೋ ಒಂದು ತಳಿಯಲ್ಲಿ ಒಂದು ರೋಗ, ಸಮಸ್ಯೆ ಕಂಡು ಬಂದರೆ ಅದರ ನಿವಾರಣೆಗೆ ಇನ್ನೊಂದು ತಳಿ ಬರುತ್ತದೆ. ಅದರಲ್ಲಿ ಇನ್ನೇನೋ ಸಮಸ್ಯೆ ಇರುತ್ತದೆ. ಈ ಮಧ್ಯೆ ರೈತ ತನ್ನ ಆರ್ಥಿಕ ದುಸ್ಥಿತಿಯಿಂದ ಇನ್ನಷ್ಟು ಹೈರಾಣಾಗಿರುತ್ತಾನೆ ಎಂದರು.
ಒಂದು ಕಡೆ ಅನಿಶ್ಚಿತ ಬದುಕು. ಮಳೆ ಆಗುತ್ತಾ ಗೊತ್ತಿಲ್ಲ. ಕೊಳವೆ ಬಾವಿ ತೆಗೆದರೆ ನೀರು ಸಿಗುತ್ತಾ ಗೊತ್ತಿಲ್ಲ. ನೀರು ಇದ್ದರೂ ಬೆಳೆ ಸಿಗುತ್ತಾ ಗೊತ್ತಿಲ್ಲ. ಬೆಳೆ ಬಂದರೂ ಬೆಲೆ ಸಿಗುತ್ತಾ ಗೊತ್ತಿಲ್ಲ. ಈ ರೀತಿ ಅನಿಶ್ಚಿತತೆ ಇರುತ್ತದೆ. ಈ ಅಸ್ಥಿರತೆ ಹೋಗಬೇಕಾಗಿದೆ ಎಂದರು.
ಹಳ್ಳಿಗಳಲ್ಲಿ ಕೃಷಿ ಜೊತೆಗೆ ವ್ಯವಹಾರ ಹೊಂದಿರುವ ಕುಟುಂಬಗಳ ಸ್ಥಿತಿ ಉತ್ತಮವಾಗಿದೆ. ಈ ನಿಟ್ಟಿನಲ್ಲಿ ರೈತರ ಮಕ್ಕಳು ವಿದ್ಯಾವಂತರಾಗಲಿ ಎಂಬ ಉದ್ದೇಶದಿಂದ ಇಡಿ ಭಾರತದಲ್ಲಿ ಪ್ರಥಮವಾಗಿ ರೈತರ ಮಕ್ಕಳಿಗೆ ಕೃಷಿ ವಿದ್ಯಾನಿಧಿ ಯೋಜನೆಯನ್ನು ಜಾರಿಗೆ ತಂದಿದ್ದೇನೆ ಎಂದರು.