ಕೊರೊನಾ ವೈರಸ್ ವಿರುದ್ಧದ ಹೋರಾಟಕ್ಕೆ ಇಡೀ ದೇಶವೇ ಕೈ ಜೋಡಿಸಿದ್ದು, ಮಾರ್ಚ್ ತಿಂಗಳ ಕೊನೆಯಲ್ಲಿ ಪ್ರಾರಂಭವಾದ ಪ್ರಧಾನ ಮಂತ್ರಿ ನಾಗರಿಕ ಸಹಾಯ ಮತ್ತು ತುರ್ತು ಪರಿಸ್ಥಿತಿಗಳ ನಿಧಿ (ಪಿಎಂ ಕೇರ್ಸ್ ಫಂಡ್)ಗೆ ಕೇವಲ ಮೂರು ದಿನಗಳಲ್ಲಿ 7,314 ಕೋಟಿ ರೂ. ದೇಣಿಗೆ ಜಮೆಯಾಗಿದೆ ಎಂದು ತಿಳಿದುಬಂದಿದೆ.
ಖಾಸಗಿ ಆಂಗ್ಲ ಪತ್ರಿಕೆಯೊಂದು ಈ ಬಗ್ಗೆ ವರದಿ ಮಾಡಿದ್ದು, ಕೋವಿಡ್-19 ವೈರಸ್ ನಿಭಾಯಿಸಲು ಕೇಂದ್ರ ಸರ್ಕಾರವು ಮಾರ್ಚ್ 28ರಂದು ಪ್ರಧಾನ ಮಂತ್ರಿ ನಾಗರಿಕ ಸಹಾಯ ಮತ್ತು ತುರ್ತು ಪರಿಸ್ಥಿತಿಗಳ ಪರಿಹಾರ ನಿಧಿಯನ್ನು ರಚಿಸಿತ್ತು. ಪ್ರಧಾನಿ ನರೇಂದ್ರ ಮೋದಿ ಅವರು, ಪಿಎಂ ಕೇರ್ಸ್ ಗೆ ಉದಾರವಾಗಿ ದೇಣಿಗೆ ನೀಡಬೇಕೆಂದು ಜನತೆಗೆ ಮನವಿ ಮಾಡಿಕೊಂಡಿದ್ದರು.
ಪ್ರಧಾನಿ ನರೇಂದ್ರ ಮೋದಿ ಅವರ ಕರೆಗೆ ಓಗೊಟ್ಟಿದ್ದ ದೇಶದ ಜನತೆ ಸಮರೋಪಾದಿಯಲ್ಲಿ ಪಿಎಂ ಕೇರ್ಸ್ ನಿಧಿಗೆ ದೇಣಿಗೆ ನೀಡುತ್ತಿದ್ದಾರೆ. ಈ ಪೈಕಿ ಬಾಲಿವುಡ್ ಸೆಲೆಬ್ರಿಟಿಗಳು, ಕ್ರೀಡಾಪಟುಗಳು, ಕ್ರಿಕೆಟ್ ಆಟಗಾರರು, ಉದ್ಯಮಿಗಳು ಸೇರಿದಂತೆ ಹಲವಾರು ಗಣ್ಯರು ಪಿಎಂ-ಕೇರ್ಸ್ ನಿಧಿಗೆ ದೇಣಿಗೆ ನೀಡಿದ್ದಾರೆ. ಟಾಟಾ ಸನ್ಸ್, ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ಅದಾನಿ ಗ್ರೂಪ್‍ನಂತಹ ಕಾರ್ಪೋರೇಟ್ ಸಂಸ್ಥೆಗಳು ಸಹ ತುರ್ತು ನಿಧಿಗೆ ತಮ್ಮ ಪಾಲನ್ನು ನೀಡಿವೆ.
ಹೀಗೆ ಕಳೆದ ಮೂರು ದಿನಗಳಿಂದ ಪಿಎಂ ಕೇರ್ಸ್ ಫಂಡ್ ಗೆ ಬರೊಬ್ಬರಿ 7,314 ಕೋಟಿ ರೂ. ದೇಣಿಗೆ ಜಮೆಯಾಗಿದೆ. ಈ ಪೈಕಿ ಕಾರ್ಪೊರೇಟ್ ಸಂಸ್ಥೆಗಳಾದ ಟಾಟಾ ಗ್ರೂಪ್ 1,500 ಕೋಟಿ ರೂ., ರಿಲಯನ್ಸ್ ಇಂಡಸ್ಟ್ರೀಸ್ 500 ಕೋಟಿ ರೂ., ಒಎನ್‍ಜಿಸಿ 300 ಕೋಟಿ ರೂ., ಸರ್ಕಾರಿ ಸಂಸ್ಥೆಗಳಾದ ಭಾರತೀಯ ರೈಲ್ವೆ 151 ಕೋಟಿ ರೂ. ಮತ್ತು ಲಾರ್ಸೆನ್ ಮತ್ತು ಟೂಬ್ರೊ 150 ಕೋಟಿ ರೂ, ವಿಪ್ರೋ ಮತ್ತು ಅಜೀಮ್ ಪ್ರೇಮ್ ಜೀ ಅವರ 1125 ಕೋಟಿ ರೂ ದೇಣಿಗೆ ಸೇರಿದೆ.