ಬೆಂಗಳೂರು: ಮೇಕೆದಾಟು ಯೋಜನೆ ಜಾರಿಗೆ ಒತ್ತಾಯಿಸಿ ಕಾಂಗ್ರೆಸ್ ನಾಯಕರು ನಡೆಸಲುದ್ದೇಶಿಸಿರುವ ಪಾದಯಾತ್ರೆ ಬಗ್ಗೆ ಜೆಡಿಎಸ್ ಟೀಕೆ ಮಾಡಿದ್ದಾರೆ. ತಮ್ಮ ಪಕ್ಷ ಪಾದಯಾತ್ರೆ ಮಾಡುತ್ತೆ ಎಂಬ ಕಾರಣಕ್ಕಾಗಿ ಅದಕ್ಕೆ ಮುನ್ನವೇ ಕಾಂಗ್ರೆಸ್ ನಾಯಕರು ಪಾದಯಾತ್ರೆ ನಡೆಸಲು ಮುಂದಾಗಿದೆ ಎಂದು ಜೆಡಿಎಸ್ ನಾಯಕ, ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಬಿಡದಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ನಡಿಗೆ ಕೃಷ್ಣೆಯ ಕಡೆಗೆ ಎಂದು 2013ರಲ್ಲಿ ಪಾದಯಾತ್ರೆ ಮಾಡಿದರು ಕಾಂಗ್ರೆಸ್ ನಾಯಕರು. ಪ್ರತಿ ವರ್ಷ 10 ಸಾವಿರ ಕೋಟಿ ಕೊಡ್ತೇವೆಂದು ಹೇಳಿದ್ದರು. ಕಳೆದ ದಿನ ಅಧಿವೇಶನದಲ್ಲಿ ಇದರ ಬಗ್ಗೆ ಚರ್ಚೆ ಮಾಡಿದ್ದೇನೆ. ವರ್ಷಕ್ಕೆ 10 ಸಾವಿರ ಕೋಟಿ ಕೊಡುತ್ತೇವೆ ಎಂದು ನಂಬಿಸಿದ್ದರು. ಈಗ 5 ವರ್ಷಕ್ಕೆ 8 ಸಾವಿರ ಕೋಟಿ ಕೊಟ್ಟಿದ್ದಾರೆ. ಈ 8 ಸಾವಿರ ಕೋಟಿಯಲ್ಲಿ ರೈತರ ಜಮೀನಿಗೆ ಒಂದು ಹನಿ ನೀರು ಹೋಯ್ತಾ? ಮುಖ್ಯ ಕಾಲುವೆಯಲ್ಲಿ ಹನಿ ನೀರು ಹರಿಯಲಿಲ್ಲ. ಗುತ್ತಿಗೆದಾರರ ಜತೆ ಸೇರಿ ದುಡ್ಡು ಹಂಚಿಕೊಂಡರು. ಇದು ಇವರ ಸಾಧನೆ. ಈಗ ಮೇಕೆದಾಟು ಬಗ್ಗೆ ರೌಂಡ್ ಹಾಕಿಕೊಂಡು ಬರ್ತಾರಂತೆ ಎಂದು ಲೇವಡಿ ಮಾಡಿದರು.
ಕನಕಪುರ, ರಾಮನಗರ, ಬಿಡದಿ ಮಾರ್ಗವಾಗಿ 9 ದಿನ ಪಾದಯಾತ್ರೆ ಮಾಡ್ತಾರಂತೆ. ಯಾವ ಪುರುಷಾರ್ಥಕ್ಕೆ ಪಾದಯಾತ್ರೆ ಮಾಡ್ತಾರೆ ಇವರು? ಜೆಡಿಎಸ್ ಕೊಟ್ಟ ನೀರಾವರಿಗೂ ಕಾಂಗ್ರೆಸ್ ನೀರಾವರಿ ಕುರಿತ ಬೂಟಾಟಿಕೆಗೂ ಬಹಳ ವ್ಯತ್ಯಾಸವಿದೆ. ಜನರ ಪರವಾಗಿ, ನೀರಾವರಿ ಬಗ್ಗೆ ಮೊದಲು ರಾಜ್ಯದಲ್ಲಿ ಪಾದಯಾತ್ರೆ ಪ್ರಾರಂಭವಾಗಿದ್ದೆ ಮೊದಲು ದೇವೇಗೌಡರಿಂದ. ಈಗ ಅದೇ ಪರಿಕಲ್ಪನೆಯನ್ನು ಹೈಜಾಕ್ ಮಾಡಿಕೊಂಡು ಈ ಭಾಗದ ಜನರನ್ನ ಮರಳು ಮಾಡಲು ಹೊರಟ್ಟಿದ್ದಾರೆ ಎಂದು ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ಮತ್ತು ಬಿಜೆಪಿ ಜನರಿಗೆ ಕಣ್ಣೊರೆಸುವ ತಂತ್ರ ಅನುಸರಿಸುತ್ತಿವೆ. ಈ ಎರಡೂ ರಾಷ್ಟ್ರೀಯ ಪಕ್ಷಗಳಿಂದ ಮೇಕೆದಾಟು ಅನುಷ್ಠಾನ ತರಲು ಸಾಧ್ಯವಿಲ್ಲ. ಆ ಯೋಜನೆ ಜಾರಿ ಜೆಡಿಎಸ್ ಪಕ್ಷದಿಂದ ಮಾತ್ರ ಜಾರಿ ಸಾಧ್ಯ. ನಾವು ಈ ಮೊದಲೇ ರಾಜ್ಯಪಾಲರಿಗೂ ಮನವಿ ಕೊಟ್ಟಿದ್ದೆವು. ಮುಖ್ಯಮಂತ್ರಿಗೂ ಈ ಬಗ್ಗೆ ಮನವಿ ಕೊಟ್ಟಿದ್ದೆವು. ಪಕ್ಷದ ವತಿಯಿಂದ ದೊಡ್ಡ ಹೋರಾಟ ಮಾಡ್ತೇವೆಂದು ಹೇಳಿದ್ದೆವು ಎಂದರು.
ನೀರಾವರಿ ಯೋಜನೆಗಳನ್ನು ಕಾರ್ಯಗತ ಮಾಡುವ ನಿಟ್ಟಿನಲ್ಲಿ ನಾವು ಪಾದಯಾತ್ರೆ ಮಾಡ್ತೇವೆಂದು ಹೆದರಿ ಕಾಂಗ್ರೆಸ್ ನಾಯಕರು ತರಾತುರಿಯಲ್ಲಿ ಮೇಕೆದಾಟು ಪಾದಯಾತ್ರೆಗೆ ಹೊರಟ್ಟಿದ್ದಾರೆ. ಅವರು ಪಾದಯಾತ್ರೆ ಮಾದುತ್ತಿರುವುದು ಕೇವಲ ಮತಕ್ಕಾಗಿ. ದೇವೇಗೌಡರನ್ನು ಹೊರತಾಗಿ ಇನ್ಯಾವ ಕಾಂಗ್ರೆಸ್ ನಾಯಕರಿಂದ ಸಹ ನೀರಾವರಿಗೆ ಆದ್ಯತೆ ಸಿಕ್ಕಿಲ್ಲ ಎಂದು ಅವರು ಹೆಚ್ಡಿಕೆ ತಿಳಿಸಿದರು.
ಜೆಡಿಎಸ್ ಪಕ್ಷದ ನಿಲುವು ಮೇಕೆದಾಟು ಅಣೆಕಟ್ಟು ಕಟ್ಟಲೇಬೇಕು ಎಂಬುದು. ಟೆಕ್ನಿಕಲ್ ಪಾಯಿಂಟ್ ಇಟ್ಟುಕೊಂಡು ಕೆಲಸ ಶುರುಮಾಡಬೇಕು. ಆದರೆ ಇವರಿಗೆ ಪ್ರಚಾರ ಬೇಕಿದೆ ಅಷ್ಟೇ ಎಂದು ಅವರು ಮಾತಿನ ಚಾಟಿ ಬೀಸಿದರು.
ರಾಮನಗರಕ್ಕೂ ನನಗೂ ಪೂರ್ವ ಜನ್ಮದ ಅನುಬಂಧವಿದೆ. ಟೀಕೆ ಟಿಪ್ಪಣಿಗಳಿಗೆ ಉತ್ತರ ನೀಡುವ ಅವಶ್ಯಕತೆ ಇಲ್ಲ. ಸಿಎಂ ಆಗಿ ಶಾಸಕನಾಗಿ ಅಭಿವೃದ್ಧಿ ಕಾರ್ಯ ಮಾಡಿದ್ದೇನೆ. ಯಾರಿಂದಲೂ ಸರ್ಟಿಫಿಕೇಟ್ ಬೇಕಾಗಿಲ್ಲ. ಅಭಿವೃದ್ಧಿ ಬಗ್ಗೆ ಸರ್ಟಿಫಿಕೇಟ್ ಬೇಕಾಗಿಲ್ಲ. ಜಿಲ್ಲೆಯ ಜನರು ನೀಡುವ ಸರ್ಟಿಫಿಕೇಟ್ ಮುಖ್ಯ ನನಗೆ. ಜಿಲ್ಲೆಯ ಜನರು ನನ್ನನ್ನು ಮನೆ ಮಗನಂತೆ ಕಂಡಿದ್ದಾರೆ ಎಂದು ಕುಮಾರಸ್ವಾಮಿ ಹೇಳಿದರು.