ಮಂಗಳೂರು, ಅ.1: ರಾಜ್ಯದಲ್ಲಿ 319 ಪ್ರವಾಸೋದ್ಯಮ ತಾಣಗಳು 41 ಪ್ರವಾಸಿ ವಲಯಗಳನ್ನು ಗುರುತಿಸಿದ್ದು, ಕರಾವಳಿ, ಪಶ್ಚಿಮ ಘಟ್ಟ ಮತ್ತು ಪಾರಂಪರಿಕ ಪ್ರವಾಸೋದ್ಯಮ ಸೇರಿಸಿ ಮುಂದಿನ ವರ್ಷ ಸಮಗ್ರ ಪ್ರವಾಸೋದ್ಯಮ ನೀತಿ ಜಾರಿಗೆ ತರಲಾಗುವುದು ಎಂದು ಕನ್ನಡ ಮತ್ತು ಸಂಸ್ಕೃತಿ ಹಾಗೂ ಪ್ರವಾಸೋದ್ಯಮ ಖಾತೆ ಸಚಿವ ಸಿ.ಟಿ.ರವಿ ಹೇಳಿದರು.ಮಂಗಳೂರು ಪ್ರೆಸ್ ಕ್ಲಬ್‌ನಲ್ಲಿ ಸೋಮವಾರ ದ.ಕ. ಕಾರ್ಯನಿರತ ಪತ್ರಕರ್ತರ ಸಂಘ ಆಯೋಜಿಸಿದ್ದ ಮಾಧ್ಯಮ ಸಂವಾದದಲ್ಲಿ ಅವರು ಮಾತನಾಡಿದರು.
ದೇಶದಲ್ಲಿ ಇಷ್ಟರ ತನಕ ಪ್ರವಾಸೋದ್ಯಮ ಅಭಿವೃದ್ಧಿಯನ್ನು ಆದ್ಯತಾ ವಲಯವನ್ನಾಗಿ ಪರಿಗಣಿಸಿರಲಿಲ್ಲ. ಪ್ರಧಾನಿ ನರೇಂದ್ರ ಮೋದಿ 9,500 ಕೋಟಿ ರೂ. ಈ ಕ್ಷೇತ್ರಕ್ಕೆ ಮೀಸಲಿಟ್ಟಿದ್ದಾರೆ. ಪ್ರವಾಸೋದ್ಯಮ ಸಚಿವನಾಗಿ ಒಂದು ತಿಂಗಳಲ್ಲಿ 11 ಜಿಲ್ಲೆಗಳಿಗೆ ಭೇಟಿ ನೀಡಿದ್ದು, ನವೆಂಬರ್ ಅಂತ್ಯದ ತನಕ ಅಧ್ಯಯನ ಪ್ರವಾಸ ನಡೆಸಿ, ತಜ್ಞರ ಜತೆ ಚರ್ಚಿಸಿ, ಮುಂದಿನ ಬಜೆಟ್‌ಗೆ ಸಮಗ್ರ ವರದಿ ಸಲ್ಲಿಸಿ ಅನುಷ್ಠಾನಕ್ಕೆ ತರಲಾಗುವುದು ಎಂದರು.
ಕರಾವಳಿಯು ಧಾರ್ಮಿಕ, ಶೈಕ್ಷಣಿಕ ಪ್ರವಾಸಿ ತಾಣವಾಗಿ ಮಾತ್ರ ಪ್ರಸಿದ್ಧಿ ಪಡೆದಿದೆ. ಇಲ್ಲಿ 13 ಕುದ್ರುಗಳ ಅಭಿವೃದ್ಧಿ, ಕ್ರೀಡಾ ಚಟುವಟಿಕೆಗಳಿಗೆ ಅವಕಾಶಗಳಿವೆ. ಶಿಕ್ಷಣ ಸಂಸ್ಥೆಗಳ ಅಧ್ಯಯನ ಪ್ರವಾಸೋದ್ಯಮ ಕಟ್ಟಿ ಕೊಡಬೇಕಾಗಿದೆ. ಕಂಬಳ ಕ್ರೀಡೆಯನ್ನು ವಿಶ್ವದ ಪ್ರವಾಸಿಗರು ಆಕರ್ಷಿಸುವಂತೆ ಮಾಡಬೇಕು ಎಂದರು.
ನಮ್ಮ ಅಪೂರ್ವ ಸಾಂಸ್ಕೃತಿಕ ಪ್ರವಾಸೋದ್ಯಮವನ್ನು ಶೊಕೇಸ್ ಮಾಡುವಲ್ಲಿ ನಾವು ಹಿಂದೆ ಬಿದ್ದಿದ್ದೇವೆ. ವಿದೇಶಿ ಪ್ರವಾಸಿಗರು ಹೆಚ್ಚಿನ ಸುರಕ್ಷೆ ಮತ್ತು ಸಂಪರ್ಕ ಬಯಸುತ್ತಾರೆ. ಈ ನಿಟ್ಟಿನಲ್ಲಿ ಕರಾವಳಿಯನ್ನು ಸಂಪರ್ಕಿಸುವ ನಾಲ್ಕು ಪ್ರಮುಖ ರಸ್ತೆಗಳ ಅಭಿವೃದ್ಧಿಯಾಗಬೇಕು. ಮಕ್ಕಳನ್ನು ಆಕರ್ಷಿಸುವ ಪ್ರವಾಸೋದ್ಯಮ ಅಭಿವೃದ್ಧಿ ಮಾಡಬೇಕು. ಖಾಸಗಿ ಸಹಭಾಗಿತ್ವದಿಂದ ಹೆಚ್ಚಿನ ಉದ್ಯೋಗ, ಆದಾಯ ಬರಲಿದೆ. ಕೆಲವೇ ಸೆಕೆಂಡುಗಳ ವೀಡಿಯೊವನ್ನು ಸಾಮಾಜಿಕ ಜಾಲ ತಾಣಗಳ ಮೂಲಕ ಪ್ರಚುರಪಡಿಸಿ, ಪ್ರವಾಸಿಗರನ್ನು ಆಕರ್ಷಿಸಲು ಅವಕಾಶವಿದೆ. ಆ್ಯಪ್ ಕೂಡಾ ಅಭಿವೃದ್ಧಿಪಡಿಸಲಾಗುವುದು ಎಂದರು.
ದೇವಸ್ಥಾನದ ಯಾತ್ರಿ ನಿವಾಸಗಳ ನಿರ್ಮಾಣ, ಉಪಯೋಗ ಮತ್ತು ನಿರ್ವಹಣೆ ಕುರಿತು ಸೋಶಿಯಲ್ ಆಡಿಟ್ ಮಾಡಿಸಲು ಸೂಚಿಸಿದ್ದೇನೆ. ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಳು ಸಿಬ್ಬಂದಿ ಕೊರತೆ ಅನುಭಸುತ್ತಿವೆ. ಈ ಸವಾಲು ಎದುರಿಸಿ, ಇಲಾಖೆಗಳಿಗೆ ನ್ಯಾಯ ಒದಗಿಸುವ ಪ್ರಯತ್ನ ಮಾಡುತ್ತೇನೆ. ದಕ್ಷಿಣ ಕನ್ನಡ ಜಿಲ್ಲೆಗೆ ರಂಗ ಮಂದಿರ ಇಲ್ಲ ಎಂಬುದು ಆಶ್ಚರ್ಯಕರ. ಈ ಬಗ್ಗೆ ಸಿಎಂ ಜತೆ ಚರ್ಚಿಸಿ, ಮುಂದಿನ ಬಜೆಟ್‌ನಲ್ಲಿ ಅನುದಾನ ಘೋಷಣೆ ಮಾಡಿಸಲಾಗುವುದು ಎಂದು ಕನ್ನಡ ಮತ್ತು ಸಂಸ್ಕೃತಿ ಹಾಗೂ ಪ್ರವಾಸೋದ್ಯಮ ಖಾತೆ ಸಚಿವ ಸಿ.ಟಿ.ರವಿ ಹೇಳಿದರು.