ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಚುನಾವಣೋತ್ತರ ಹಿಂಸಾಚಾರ ಮುಂದುವರೆದಿದ್ದು, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ಭವಾನಿಪುರ ಕ್ಷೇತ್ರದಲ್ಲಿ ಗೆದ್ದಿದ್ದ ಬಿಜೆಪಿ ನಾಯಕ ಸುವೇಂಧು ಅಧಿಕಾರಿ (Suvendu Adhikari) ಅವರ ಆಪ್ತ ಸಹಾಯಕನನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ.
ಬಂಗಾಳದ ಉತ್ತರ 24 ಪರಗಣ ಜಿಲ್ಲೆಯ ಮಧ್ಯಮ್ ಗ್ರಾಮ್ ಸಿಟಿಯಲ್ಲಿ ಈ ಗುಂಡಿನ ದಾಳಿ ನಡೆದಿದ್ದು, ಮೃತನನ್ನು ಚಂದ್ರನಾಥ್ ದತ್ (Chandra Nath Dutt) ಎಂದು ಗುರುತಿಸಲಾಗಿದೆ. ಅವರು ಸುವೇಂಧು ಅಧಿಕಾರಿಯ ಆಪ್ತ ಸಹಾಯಕರಾಗಿದ್ದರು ಎಂದು ತಿಳಿದುಬಂದಿದೆ.
ಗುಂಡಿನ ದಾಳಿಯಲ್ಲಿ ಚಂದ್ರನಾಥ್ ದತ್ ಅವರ ಎದೆಗೆ ನಾಲ್ಕು ಸುತ್ತು ಗುಂಡು ಹಾರಿಸಲಾಗಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಗಾಯಗೊಂಡ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಈ ಘಟನೆಯ ಹಿಂದೆ ತೃಣಮೂಲ ಕಾಂಗ್ರೆಸ್ (TMC) ಕಾರ್ಯಕರ್ತರ ಕೈವಾಡವಿದೆ ಎಂದು ಬಿಜೆಪಿ ಆರೋಪಿಸಿದೆ. ಘಟನೆ ಬಳಿಕ ಪ್ರದೇಶದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು, ಭದ್ರತೆಯನ್ನು ಹೆಚ್ಚಿಸಲಾಗಿದೆ.
























































