ನವದೆಹಲಿ[ಆ.14]: ಜಮ್ಮು- ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ಹಿಂಪಡೆದ ವಿಷಯವನ್ನು ಅಂತಾರಾಷ್ಟ್ರೀಯ ವಿವಾದ ಮಾಡಲು ಯತ್ನಿಸಿದ್ದ ಪಾಕಿಸ್ತಾನಕ್ಕೆ ಆರಂಭದಲ್ಲೇ ಭಾರೀ ಮುಖಭಂಗವಾಗಿದೆ. ಕಾಶ್ಮೀರ ವಿಷಯ ಭಾರತ ಮತ್ತು ಪಾಕಿಸ್ತಾನ ನಡುವಿನ ದ್ವಿಪಕ್ಷೀಯ ವಿಷಯವಾಗಿದ್ದು, ಅದನ್ನು ಉಭಯ ದೇಶಗಳು ಪರಸ್ಪರ ಮಾತುಕತೆ ಮೂಲಕವೇ ಇತ್ಯರ್ಥಪಡಿಸಿಕೊಳ್ಳಬೇಕು ಎಂದು ಹಾಲಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಅಧ್ಯಕ್ಷ ಸ್ಥಾನ ವಹಿಸಿಕೊಂಡಿರುವ ಪೋಲೆಂಡ್ ದೇಶ ಸ್ಪಷ್ಟಪಡಿಸಿದೆ.
ಇದು ಈಗಾಗಲೇ ಕಾಶ್ಮೀರ ವಿಷಯ ಸಂಬಂಧ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಇತರೆ ಸದಸ್ಯರಾಷ್ಟ್ರಗಳ ಬೆಂಬಲ ಪಡೆಯಲು ವಿಫಲವಾಗಿದ್ದ ಪಾಕಿಸ್ತಾನಕ್ಕೆ ಮತ್ತಷ್ಟುಬಿಸಿತುಪ್ಪವಾಗಿ ಪರಿಣಮಿಸಿದೆ. ಜೊತೆಗೆ ಇದು ಕಾಶ್ಮೀರ ವಿಷಯದಲ್ಲಿ ಪಾಕಿಸ್ತಾನವನ್ನು ಏಕಾಂಗಿ ಮಾಡುವ ಭಾರತದ ರಾಜತಾಂತ್ರಿಕ ಯತ್ನಗಳಿಗೆ ಸಿಕ್ಕ ಜಯ ಎಂದೂ ಬಣ್ಣಿಸಲಾಗಿದೆ.
ಕಾಶ್ಮೀರ ಕುರಿತು ಕೇಂದ್ರ ಸರ್ಕಾರ ಇತ್ತೀಚೆಗೆ ಮಹತ್ವದ ನಿರ್ಧಾರ ಕೈಗೊಂಡ ದಿನದಿಂದಲೂ ಪಾಕಿಸ್ತಾನ, ಭಾರತದ ವಿರುದ್ಧ ಕಿಡಿಕಾರುತ್ತಲೇ ಇದೆ. ಇದೇ ಕಾರಣ ಮುಂದಿಟ್ಟುಕೊಂಡು ಭಾರತದ ಜೊತೆಗಿನ ವ್ಯಾಪಾರ ವಹಿವಾಟು, ರೈಲು, ಬಸ್ ಸಂಚಾರ ಸ್ಥಗಿತಗೊಳಿಸಿದೆ. ಮತ್ತೊಂದೆಡೆ ಮುಸ್ಲಿಂ ರಾಷ್ಟ್ರಗಳಿಂದ ಬೆಂಬಲ ಪಡೆಯಲು ಯತ್ನಿಸಿದೆ. ವಿಷಯದ ಕುರಿತು ವಿಶ್ವಸಂಸ್ಥೆಯ ಭದ್ರತಾ ಮಂಡಳಿಗೆ ದೂರು ನೀಡುವುದಾಗಿಯೂ ಹೇಳಿಕೊಂಡಿದೆ.
ಆದರೆ ಈ ವಿಷಯವಾಗಿ ಇದೇ ಮೊದಲ ಬಾರಿಗೆ ಮೌನ ಮುರಿದಿರುವ ಪೋಲೆಂಡ್, ಕಾಶ್ಮೀರ ವಿಷಯವು ಭಾರತ ಮತ್ತು ಪಾಕಿಸ್ತಾನಕ್ಕೆ ಸಂಬಂಧಿಸಿದ ವಿಷಯ. ಇದನ್ನು ಉಭಯ ದೇಶಗಳು ಮಾತುಕತೆ ಮೂಲಕವೇ ಇತ್ಯರ್ಥ ಪಡಿಸಿಕೊಳ್ಳುತ್ತದೆ ಎಂಬ ವಿಶ್ವಾಸವಿದೆ ಎನ್ನುವ ಮೂಲಕ, ಕಾಶ್ಮೀರ ವಿಷಯವನ್ನು ಭದ್ರತಾ ಮಂಡಳಿಗೆ ತರುವ ಪಾಕ್ ಯತ್ನಕ್ಕೆ ತನ್ನ ಪರೋಕ್ಷ ವಿರೋಧ ವ್ಯಕ್ತಪಡಿಸಿದೆ. ಈ ಕುರಿತು ಹೇಳಿಕೆ ನೀಡಿರುವ ಭಾರತದಲ್ಲಿನ ಪೋಲೆಂಡ್‌ನ ರಾಯಭಾರಿ ಆ್ಯಡಂ ಬುರಾಕೋವ್ಸಿ$್ಕ, ‘ಕಾಶ್ಮೀರ ವಿವಾದವನ್ನು ಶಾಂತಿಯುತ ಮಾತುಕತೆ ಮೂಲಕವೇ ಭಾರತ ಮತ್ತು ಪಾಕಿಸ್ತಾನ ಬಗೆಹರಿಸಿಕೊಳ್ಳಬಹುದು ಎಂಬುದು ನಮ್ಮ ನಿಲುವು. ಇಂಥ ಮಾತುಕತೆ ದ್ವಿಪಕ್ಷೀಯ ಮಟ್ಟದಲ್ಲೇ ನಡೆಯಬೇಕು. ಈ ವಿಷಯದಲ್ಲಿ ಯುರೋಪಿಯನ್ ಒಕ್ಕೂಟ ಹೊಂದಿರುವ ನಿಲುವನ್ನೇ ನಾವು ಹೊಂದಿದ್ದೇವೆ’ ಎಂದು ಹೇಳಿದ್ದಾರೆ.



























































