ಬೆಂಗಳೂರು,ಅ.22: ಬೆಂಗಳೂರಿನಲ್ಲಿ ನೀರು ಉಳಿಸಲು ಜಲಮಂಡಳಿ ಹೊಸ ಪ್ಲಾನ್ ಮಾಡಿದೆ. ಕಾವೇರಿ ಹಾಗೂ ಬೋರ್‌ವೆಲ್ ನೀರನ್ನು ಪೋಲು ಮಾಡುವ ನಿರ್ಲಕ್ಷ್ಯಕ್ಕೆ ಪಾಠ ಕಲಿಸಲು ಬೆಂಗಳೂರು ಜಲಮಂಡಳಿ ದಂಡ ವಿಧಿಸುವ ನಿಯಮ ರೂಪಿಸಲಿದೆ. ನೀರು ಪೋಲಾಗದಂತೆ ನೋಡಿಕೊಳ್ಳಬೇಕೆಂಬ ರಾಜ್ಯ ಸರಕಾರದ ಸೂಚನೆಯಂತೆ ಮನೆಯ ಓವರ್ ಹೆಡ್ ಟ್ಯಾಂಕ್‌ನಿಂದ ನೀರು ತುಂಬಿ ಹರಿದರೆ 1,000 ರೂ. ದಂಡ ಖಚಿತವಂತೆ..!
ಜಲಮಂಡಳಿಯಿಂದ ನೀರು ಪೂರೈಸಿದಾಗ ಕೆಳಗಿನ ಸಂಪ್‌ನಲ್ಲಿ ತುಂಬಿಕೊಂಡು ನಂತರ ಅದನ್ನು ಮೇಲಿನ ಟ್ಯಾಂಕ್‌ಗೆ ಪಂಪ್ ಮಾಡಿಕೊಳ್ಳಲಾಗುತ್ತದೆ. ಇಂತಹ ಸಂದರ್ಭದಲ್ಲಿ ನೀರು ತುಂಬಿ ಟ್ಯಾಂಕ್‌ನಿಂದ ಉಕ್ಕಿ ಹರಿಯುವುದು ಕಂಡುಬಂದಿದೆ. ಪಂಪ್ ಆನ್ ಮಾಡಿ ಮತ್ತೆ ಆಫ್ ಮಾಡುವುದನ್ನು ಮರೆಯುವುದರಿಂದ ಸಾವಿರಾರು ಲೀಟರ್ ಕಾವೇರಿ ನೀರು ವ್ಯರ್ಥವಾಗುತ್ತಿದೆ. ಬೋರ್‌ವೆಲ್‌ನಿಂದ ಪಂಪ್ ಮಾಡಿಕೊಳ್ಳುವಾಗಲೂ ಈ ರೀತಿಯ ತಪ್ಪುಗಳು ಕಂಡುಬರುತ್ತಿವೆ.
ಟ್ಯಾಂಕ್‌ನಲ್ಲಿ ನೀರು ಮೇಲ್ಪಟ್ಟಕ್ಕೆ ಬಂದಾಗ ಸ್ವಯಂಚಾಲಿತವಾಗಿ ಪಂಪ್ ಆಫ್ ಆಗುವ ‘ಆಟೊಮೆಟಿಕ್ ವಾಟರ್ ಕಂಟ್ರೋಲ್ ಸಿಸ್ಟಮ್’ ತಂತ್ರಜ್ಞಾನ ಲಭ್ಯವಿದೆ. ಸಿಂಟೆಕ್ಸ್‌ನಲ್ಲಿ ಸಾಮಾನ್ಯವಾಗಿ ಬಾಲ್ ಕಾಕ್ ಬಳಸಿ ನೀರು ವ್ಯರ್ಥವಾಗುವುದನ್ನು ತಡೆಯಬಹುದು. ಆದರೂ ಯಾರೂ ಇದನ್ನು ಅನುಸರಿಸುತ್ತಿಲ್ಲ.
ಈ ರೀತಿ ನೀರು ಪೋಲು ಮಾಡಿದರೆ ದಂಡ ಹಾಕಲು ನಿಯಮ ರೂಪಿಸಲಾಗುತ್ತಿದೆ. ಈ ನಿಯಮವನ್ನು ಬಳಸಿಕೊಂಡು ಅಧಿಕಾರಿಗಳಿಗೆ ಜನರಿಗೆ ದಂಡ ವಿಧಿಸಲು ಅನುಕೂಲವಾಗಲಿದೆ. ಆದರೆ ಈ ತಪ್ಪುಗಳನ್ನು ಪತ್ತೆ ಮಾಡುವುದೇ ಸವಾಲಾಗಿದೆ. ಸೇವಾಠಾಣೆಗಳ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುವ ಮೀಟರ್ ರೀಡರ್ ಹಾಗೂ ಸ್ಥಳೀಯ ಅಧಿಕಾರಿಗಳಿಗೆ ಸೂಚನೆ ನೀಡಿ ದಂಡ ವಿಧಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.