ಬೆಂಗಳೂರು: 2021ನೇ ಸಾಲಿನ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ನಾಳೆಯಿಂದ, ಅಂದರೆ; ಅಗಸ್ಟ್ 28- 29 ಮತ್ತು 30ರಂದು ರಾಜ್ಯದಲ್ಲೆಡೆ ನಡೆಯಲಿದ್ದು, ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಅವರು ಶುಕ್ರವಾರ ಎಲ್ಲ ಸಿದ್ಧತೆಗಳನ್ನು ಖುದ್ದು ಪರಿಶೀಲಿಸಿದರು.
ಈ ಸಂಬಂಧ ಬೆಂಗಳೂರಿನಲ್ಲಿರುವ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಉನ್ನತ ಅಧಿಕಾರಿಗಳ ಸಭೆ ನಡೆಸಿದ ನಂತರ ಅವರು, ಮಲ್ಲೇಶ್ವರದ 18ನೇ ಕ್ರಾಸ್ ನಲ್ಲಿರುವ ಸರಕಾರಿ ಪಿಯು ಕಾಲೇಜಿಗೆ ತೆರಳಿ ಪರೀಕ್ಷಾ ಸಿದ್ಧತೆಗಳನ್ನು ನೇರವಾಗಿ ವೀಕ್ಷಿಸಿದರು.
ಕಳೆದ ವರ್ಷದಂತೆ ಈ ವರ್ಷವೂ ಕೋವಿಡ್ ಸವಾಲಿನ ನಡುವೆಯೇ ಸಿಇಟಿ ನಡೆಯುತ್ತಿದ್ದು, ಸರಕಾರದ ಮಾರ್ಗಸೂಚಿಯಂತೆ ಕೈಗೊಳ್ಳಲಾಗಿರುವ ಮುನ್ನೆಚ್ಚರಿಕೆಗಳನ್ನು ಸಚಿವರು ಪರಿಶೀಲನೆ ಮಾಡಿದರು.
ಬಳಿಕ ಈ ಬಗ್ಗೆ ಮಾಧ್ಯಮ ಪ್ರತಿನಿಧಿಗಳಿಗೆ ಮಾಹಿತಿ ನೀಡಿದ ಡಾ.ಅಶ್ವತ್ಥನಾರಾಯಣ ಅವರು, ಕಳೆದ ವರ್ಷದಂತೆ ಈ ವರ್ಷವೂ ಸಿಇಟಿ ನಡೆಯುತ್ತಿದ್ದು, ಕೋವಿಡ್ ಒತ್ತಡವನ್ನು ಮನಸ್ಸಿನಿಂದ ತೆಗೆದು ಹಾಕಿ ವಿದ್ಯಾರ್ಥಿಗಳು ಧೈರ್ಯ, ಸಂತೋಷದಿಂದ ಬರೆಯಬೇಕು. ಇದನ್ನು ‘ಸಿಇಟಿ ಪರೀಕ್ಷೋತ್ಸವʼ ಎಂದು ಕರೆಯಲು ಬಯಸುತ್ತೇನೆ ಎಂದರು.
ಮಹತ್ವದ ಅಂಶವೆಂದರೆ, ಕೋವಿಡ್ ಕಾರಣದಿಂದ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ದ್ವಿತೀಯ ಪಿಯುಸಿಯ ಎಲ್ಲ ವಿದ್ಯಾರ್ಥಿಗಳನ್ನು ಪಾಸ್ ಮಾಡಲಾಗಿದ್ದು. ಸಿಇಟಿ ಅಂಕದ ಆಧಾರದ ಮೇಲೆಯೇ Rank ನಿರ್ಧಾರ ಮಾಡಲಾಗುವುದು ಎಂದು ಸಚಿವರು ಪ್ರಕಟಿಸಿದರು.