ಚೆನ್ನೈ: ತಮಿಳುನಾಡಿನ ಕೂನುರು ಸಮೀಪ ಸೇನಾ ಹೆಲಿಕಾಪ್ಟರ್ ಪತನಗೊಂಡು ಸೇನಾ ಸರ್ವೋಚ್ಚ ಅಧಿಕಾರಿ ಬಿಪಿನ್ ರಾವತ್ ಸೇರಿ 13 ಮಂದಿ ಹುತಾತ್ಮರಾಗಿದ್ದಾರೆ. ತಮಿಳುನಾಡಿನಲ್ಲಿ ಕಾರ್ಯಕ್ರಮವೊಂದರಲಿ ಪಾಲ್ಗೊಳ್ಳಲು ಬಿಪಿನ್ ರಾವತ್ ತೆರಳುತ್ತಿದ್ದಾಗ ಈ ಭೀಕರ ದುರಂತ ಸಂಭವಿಸಿದೆ. ರಾವತ್ ಅವರು ಮೂರು ಸೇನೆಗಳ ಮುಖ್ಯಸ್ಥರಾಗಿದ್ದು ಅವರು ಹುತಾತ್ಮರಾಗಿರುವ ಮಾಹಿತಿಯನ್ನು ವಾಯುಸೇನೆ ಅಧಿಕೃತವಾಗಿ ತಿಳಿಸಿವೆ.
ಬಿಪಿನ್ ರಾವತ್, ಅವರ ಪತ್ನಿ ಹಾಗೂ ಇತರ 12 ಮಂದಿ ಸೇನಾ ಅಧಿಕಾರಿಗಳು ಭಾರತೀಯ ವಾಯುಸೇನೆಯ ಅತ್ಯಾಧುನಿಕ MI-17 V5 ಹೆಲಿಕಾಪ್ಟರ್‌ನಲ್ಲಿ ತೆರಳುತ್ತಿದ್ದಾಗ, ತಮಿಳುನಾಡಿನ ಕೂನುರು ಸಮೀಪ ಬುಧವಾರ ಹೆಲಿಕಾಪ್ಟರ್ ಪತನವಾಗಿದೆ.
ದುರಂತದಲ್ಲಿ ಹಲವರು ಸಾವನ್ನಪ್ಪಿದ್ದು, ಬಿಪಿನ್ ರಾವತ್ ಸೇರಿದಂತೆ ಮೂವರನ್ನು ರಕ್ಷಿಸಲಾಗಿತ್ತು. ಆದರೆ ಆಸ್ಪತ್ರೆಗೆ ದಾಖಲಾದ ರಾವತ್ ಕೂಡಾ ಚಿಕಿತ್ಸೆ ಫಲಕಾರಿಗದೆ ವಿಧಿವಶರಾಗಿದ್ದಾರೆ.
ಇದೇ ವೇಳೆ, ಸ್ಥಳದಲ್ಲೇ ಸಾವನ್ನಪ್ಪಿದ ಹನ್ನೊಂದು ಮಂದಿಯ ಶವವನ್ನು ಪೊಲೀಸರು ಹಾಗೂ ಯೋಧರ ತಂಡ ಹೊರಕ್ಕೆ ತೆಗೆದು ಆಸ್ಪತ್ರೆಗೆ ರವಾನಿಸಿದೆ.