ಬಳ್ಳಾರಿ,ಸೆ,3 : ಒಳಚರಂಡಿ ನೀರು ಮನೆಗೆ ನುಗ್ಗಿ ಜಲಾವೃತವಾದ ಹಿನ್ನೆಲೆ ಬೆಳ್ಳಂಬೆಳಿಗ್ಗೆಯೇ ಅಧಿಕಾರಿಗಳಿಗೆ ಬಳ್ಳಾರಿ ನಗರ ಶಾಸಕ ಸೋಮಶೇಖರ್ ರೆಡ್ಡಿ ಕ್ಲಾಸ್ ತೆಗೆದುಕೊಂಡಿದ್ದಾರೆ.
ಬಳ್ಳಾರಿಯ ಗಣೇಶ ಕಾಲೋನಿಯಲ್ಲಿ ಒಳಚರಂಡಿ ನೀರು ಮನೆಗಳಿಗೆ ನುಗ್ಗಿ ಜಲಾವೃತ ಹಿನ್ನೆಲೆ, ಅಲ್ಲಿನ ನಿವಾಸಿಗಳು ಮನೆಯಿಂದ ಹೊರ ಬಂದು ಸಮಸ್ಯೆ ಪರಿಹಾರ ಮಾಡದೇ ಇರುವ ಅಧಿಕಾರಿಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಸ್ಥಳಕ್ಕೆ ಆಗಮಿಸಿದ ಬಳ್ಳಾರಿ ನಗರ ಶಾಸಕ ಸೋಮಶೇಖರ್ ರೆಡ್ಡಿ, ಜಲಾವೃತಗೊಂಡ ಮನೆಯ ಕಟ್ಟೆಯ ಮೇಲೆ ಕುಳಿತರು.ಬಳಿಕ ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡರು.
ಮಹಾನಗರ ಪಾಲಿಕೆ ಆಯುಕ್ತೆ ತುಷಾರಾಮಣಿಗೆ ಶಾಸಕ ಸೋಮಶೇಖರರೆಡ್ಡಿ ಕ್ಲಾಸ್ ತೆಗೆದುಕೊಂಡರು. ಶಾಸಕರು ಕ್ಲಾಸ್ ತೆಗೆದುಕೊಂಡ ಹಿನ್ನೆಲೆ, ವಾಹನಗಳನ್ನು ತರಿಸಿ, ಕ್ಲೀನ್ ಮಾಡಲು ಅಧಿಕಾರಿಗಳು ಮುಂದಾದರು.
ಈ ವೇಳೆ ಮಾತನಾಡಿದ ಶಾಸಕ ಸೋಮಶೇಖರ್ ರೆಡ್ಡಿ ಡ್ರೈನೇಜ್ ನೀರು ಮನೆಗೆ ನುಗ್ಗಲು ಮಹಾನಗರ ಪಾಲಿಕೆ ನಿರ್ಲಕ್ಷ್ಯವೇ ಕಾರಣ. ಒಳಚರಂಡಿ ನಿರ್ವಹಣೆ ಮಾಡುವಲ್ಲಿ ಪಾಲಿಕೆ ಸಂಪೂರ್ಣ ವಿಫಲವಾಗಿದೆ. 1978ರಲ್ಲಿ ಡ್ರೈನೇಜ್ ವ್ಯವಸ್ಥೆ ನಿರ್ಮಾಣ ಮಾಡಲಾಗಿದೆ. ಆದರೆ ಈವರೆಗೂ ಯಾವುದೇ ಅಪ್ ಗ್ರೇಡ್ ಮಾಡಿಲ್ಲ ಜನಸಂಖ್ಯಾವಾರು ಡ್ರೈನೇಜ್ ವ್ಯವಸ್ಥೆ ಮಾಡುವಲ್ಲಿ ವಿಫಲವಾಗಿದೆ. ಅಮೃತ ಸ್ಕೀಂ ನಡಿ ಹೆಚ್ಚುವರಿ ಅನುದಾನಕ್ಕೆ ಮನವಿ ಮಾಡುತ್ತೇನೆ ಎಂದು ತಿಳಿಸಿದರು.