ಬೆಂಗಳೂರು: ಮಲ್ಲೇಶ್ವರ ವಿಧಾನಸಭೆ ಕ್ಷೇತ್ರದಲ್ಲಿ ಯಶಸ್ವಿಯಾಗಿ ಲಸಿಕೀರಣ ನಡೆಯುತ್ತಿದ್ದು, ಈಗ ಮನೆಮನೆಗೂ ಹೋಗಿ ವ್ಯಾಕ್ಸಿನ್ ಪಡೆಯದವರನ್ನು ಗುರುತಿಸಿ ನೀಡಲಾಗುತ್ತಿದೆ ಎಂದು ಕ್ಷೇತ್ರದ ಶಾಸಕರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದ್ದಾರೆ.
ನಗರದ ಮತ್ತಿಕೆರೆಯ ಸುಬ್ಬಯ್ಯ ಆಸ್ಪತ್ರೆ ಸಮೀಪದ ಶ್ರೀ ವೆಂಕಟೇಶ್ವರ ಶಾಲೆಯಲ್ಲಿ ಆಯೋಜಿಸಲಾಗಿದ್ದ ಲಸಿಕೆ ಶಿಬಿರಕ್ಕೆ ಚಾಲನೆ ನೀಡಿದ ನಂತರ ಮಾಧ್ಯಮಗಳ ಜತೆ ಮಾತನಾಡಿದ ಅವರು, ಡಾ.ಸಿ.ಎನ್.ಅಶ್ವತ್ಥನಾರಾಯಣ ಫೌಂಡೇಶನ್ ವತಿಯಿಂದ ಈಗಾಗಲೇ ಕ್ಷೇತ್ರದಲ್ಲಿ ಖಾಸಗಿಯವರ ಸಹಭಾಗಿತ್ವದಲ್ಲಿ 81 ಲಸಿಕೆ ಶಿಬಿರಗಳನ್ನು ಕ್ಷೇತ್ರದಲ್ಲಿ ನಡೆಸಲಾಗಿದೆ. ಇದರಲ್ಲಿ ಖಾಸಗಿ ಸಂಸ್ಥೆಗಳ ಸಹಭಾಗಿತ್ವದಲ್ಲಿ ಖರೀದಿಸಿದ ಲಸಿಕೆಯನ್ನು 40 ಸಾವಿರಕ್ಕೂ ಹೆಚ್ಚು ಮಂದಿಗೆ ಉಚಿತವಾಗಿ ನೀಡಲಾಗಿದೆ ಎಂದು ಹೇಳಿದರು.
ಯಾರಾದರೂ ತಪ್ಪಿ ಹೋಗಿದ್ದರೆ ಹುಡುಕಿ ವ್ಯಾಕ್ಸಿನ್ ನೀಡಲಾಗುತ್ತಿದೆ. ಮನೆ ಮನೆಯನ್ನೂ ಸಮೀಕ್ಷೆ ನಡೆಸಲಾಗುತ್ತಿದೆ. ಲಸಿಕೆ ಪಡೆದ ನಂತರವೂ ಜನ ಕೋವಿಡ್ ಮಾರ್ಗಸೂಚಿ ಪಾಲಿಸಬೇಕು. ಈ ಬಗ್ಗೆ ಅರಿವೂ ಮೂಡಿಸಲಾಗುತ್ತದೆ ಎಂದು ಡಿಸಿಎಂ ಹೇಳಿದರು.
ಇವತ್ತಿನ ಲಸಿಕೀಕರಣಕ್ಕೆ ಆ್ಯಕ್ಟ್ ಫೈಬರ್ ನೆಟ್ ಸಂಸ್ಥೆ 5,000ಕ್ಕೂ ಹೆಚ್ಚು ಲಸಿಕೆಗಳನ್ನು ದಾನ ಮಾಡಿದೆ. ಇದು ಅತ್ಯಂತ ಮೆಚ್ಚುಗೆಯ ಸಂಗತಿ. ಇದಕ್ಕಾಗಿ ಕಂಪನಿಯ ಸಿಇಒ ಬಾಲಾ ಮಲ್ಲಾಡಿ ಅವರಿಗೆ ಅಭಿನಂದನೆಗಳು. ಇದುವರೆಗೆ ನಗರದಲ್ಲಿ ಖಾಸಗಿ ಕಂಪನಿಗಳು 12 ಲಕ್ಷ ಲಸಿಕೆಗಳನ್ನು ನೀಡಿವೆ. ಒಟ್ಟು 30 ಲಕ್ಷ ಲಸಿಕೆ ಖಾಸಗಿ ಕ್ಷೇತ್ರದಿಂದ ಪಡೆಯುವ ಉದ್ದೇಶ ಸರಕಾರಕ್ಕಿದೆ ಎಂದು ಡಾ.ಅಶ್ವತ್ಥನಾರಾಯಣ ಹೇಳಿದರು.
ಎಲ್ಲರೂ ಲಸಿಕೆ ಹಾಕಿಸಿಕೊಳ್ಳಬೇಕು. ಮೂರನೇ ಹಂತವೇ ಬರಲಿ ಅಥವಾ ಡೆಲ್ಟಾ ಪ್ಲಸ್ ಎದುರಾಗಲಿ. ಎಲ್ಲದಕ್ಕೂ ಲಸಿಕೆಯೊಂದೇ ಪರಿಹಾರ. ಮೈಮರೆಯುವುದು ಬೇಡ. ಹೀಗಾಗಿ ಲಸಿಕೆ ಪಡೆಯುವಂತೆ ಮಲ್ಲೇಶ್ವರ ಕ್ಷೇತ್ರದಲ್ಲಿ ವ್ಯಾಪಕ ಪ್ರಚಾರ ನಡೆಸುತ್ತಿದ್ದೇವೆ. ಆಟೋಗಳಲ್ಲೂ ಪ್ರಚಾರ ನಡೆಸಲಾಗುತ್ತಿದೆ ಎಂದರು ಅವರು.
ರಾಜ್ಯದಲ್ಲಿ ಎರಡು ಕೋಟಿ ಜನರಿಗೆ ಕೋವಿಡ್ ಲಸಿಕೆ ನೀಡಲಾಗಿದೆ. ಈ ಪೈಕಿ 1.70 ಕೋಟಿ ಜನರಿಗೆ ಮೊದಲ ಡೋಸ್ ನೀಡಲಾಗಿದ್ದು, 30 ಲಕ್ಷ ಮಂದಿಗೆ ಎರಡೂ ಡೋಸ್ ಕೊಡಲಾಗಿದೆ. ಈ ಲೆಕ್ಕದಲ್ಲಿ ಒಟ್ಟಾರೆ ಜನಸಂಖ್ಯೆಯಲ್ಲಿ 37% ಜನಕ್ಕೆ ಲಸಿಕೆ ನೀಡಲಾಗಿದೆ. ಕೇಂದ್ರ ಸರಕಾರ ದೊಡ್ಡ ಪ್ರಮಾಣದಲ್ಲಿ ಲಸಿಕೆ ಪೂರೈಕೆ ಮಾಡುತ್ತಿದ್ದು, ಖಾಸಗಿ ಕಂಪನಿಗಳು ಕೂಡ ಉದಾರವಾಗಿ ಲಸಿಕೆ ದಾನ ಮಾಡುತ್ತಿವೆ ಎಂದರು ಡಿಸಿಎಂ.
ಆಕ್ಟ್ ಪೈಬರ್ ನೆಟ್ ಸಂಸ್ಥೆ ಸಿಇಒ ಬಾಲಾ ಮಲ್ಲಾಡಿ, ಆ್ಯಕ್ಟ್ ಸಂಸ್ಥೆಯ ಕಾರ್ಪೊರೇಟ್ ವ್ಯವಹಾರಗಳ ಮುಖ್ಯಸ್ಥ ಸುನಿಲ್ ಯಜಮಾನೆ ಅವರು ಈ ಸಂದರ್ಭದಲ್ಲಿ ಡಿಸಿಎಂ ಜತೆಯಲ್ಲಿದ್ದರು.