ಬೆಂಗಳೂರು: ಕೋವಿಡ್ ನಿರ್ವಹಣೆಗೆ ಸಂಬಂಧಿಸಿದಂತೆ ವೈದ್ಯರು ಹಾಗೂ ಇತರೆ ಸಿಬ್ಬಂದಿಗೆ ಎಲ್ಲ ಜಿಲ್ಲೆಗಳಲ್ಲಿ ತರಬೇತಿ ಕಾರ್ಯಕ್ರಮ ನಡೆಸಲಾಗುವುದು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.
ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯಲ್ಲಿ ಕೋವಿಡ್ ನಿರ್ವಹಣೆ ಸಂಬಂಧ ವೈದ್ಯರಿಗೆ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, 18 ವರ್ಷ ಮೇಲಿನವರೆಲ್ಲರಿಗೂ ಕೋವಿಡ್ ಲಸಿಕೆ ನೀಡಲಾಗುತ್ತಿದೆ. ಇದಕ್ಕಿಂತ ಕೆಳ ವಯಸ್ಸಿನ ಮಕ್ಕಳಿಗೆ ಸೋಂಕು ತಗುಲಬಹುದು ಎಂದು ತಜ್ಞರು ಅಂದಾಜಿಸಿದ್ದಾರೆ. ಮಧ್ಯಮ, ಹಿರಿಯ ವಯಸ್ಸಿನವರಿಗೆ ನೀಡುವ ಚಿಕಿತ್ಸೆಯನ್ನು ಮಕ್ಕಳಿಗೆ ನೀಡಲು ಸಾಧ್ಯವಿಲ್ಲ. ಈ ವಯೋಮಾನದವರಿಗೆ ಸೋಂಕು ಬಂದರೆ ಮಕ್ಕಳ ತಜ್ಞರ ಬಳಿಯೇ ಹೋಗಬೇಕೆಂದು ಸೂಚಿಸಲಾಗಿದೆ. ಇದಕ್ಕೆ ಪೂರಕವಾಗಿ ವೈದ್ಯರಿಗೆ ತರಬೇತಿ ನೀಡಲಾಗುತ್ತಿದೆ. ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ವೈದ್ಯರಿಗೆ ತರಬೇತಿ ನೀಡಲಾಗುವುದು ಎಂದರು.
ತರಬೇತಿಯನ್ನು ವಿಷಯ ತಜ್ಞರು ನೀಡುತ್ತಿದ್ದು, ಇದನ್ನು ದಾಖಲೆಯಾಗಿಸಿದರೆ ಅನುಕೂಲವಾಗುತ್ತದೆ. ಆದ್ದರಿಂದ ಇಲ್ಲಿ ನೀಡುವ ತರಬೇತಿಯನ್ನು ವೀಡಿಯೋ ರೆಕಾರ್ಡ್ ಮಾಡಿಸಿ ದಾಖಲಿಸಬೇಕು. ಇತರೆ ವೈದ್ಯರಿಗೂ ಈ ವಿಷಯ ತಿಳಿಸಬೇಕು ಎಂದು ಸೂಚಿಸಿದರು.
ಡಾ.ದೇವಿಶೆಟ್ಟಿ ಸಮಿತಿ ಮೂರನೇ ಅಲೆ ಸಿದ್ಧತೆಗೆ ವರದಿ ನೀಡಿದ್ದು, ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಕೊರೊನಾ ವೈರಾಣು ರೂಪಾಂತರಗೊಳ್ಳುತ್ತಿದ್ದು, ಮುಂದುವರಿದ ದೇಶಗಳು ಕೂಡ ಎಡವಿದೆ. ಮೊದಲ ಅಲೆಯಲ್ಲಿ ಇತರೆ ದೇಶಗಳಿಗೆ ಹೋಲಿಕೆ ಮಾಡಿದರೆ ಪರಿಣಾಮಕಾರಿಯಾಗಿ ನಿಯಂತ್ರಣ ಮಾಡಿದ್ದೇವೆ. ಎರಡನೇ ಅಲೆಗೆ ಮುನ್ನ ಮೂಲಸೌಕರ್ಯ ಹೆಚ್ಚಿಸಲಾಗಿದೆ. 4 ಸಾವಿರ ವೈದ್ಯರನ್ನು ನೇಮಿಸಲಾಗಿದೆ ಎಂದು ವಿವರಿಸಿದರು.
ಕೇರಳ, ಮಹಾರಾಷ್ಟ್ರ ಗಡಿ ಹಂಚಿಕೊಳ್ಳುವುದರಿಂದ ಕೋವಿಡ್ ಬಗ್ಗೆ ಎಚ್ಚರವಾಗಿರಬೇಕು. ಸೋಂಕು ಇನ್ನೂ ಇರುವುದರಿಂದ ಸುರಕ್ಷತಾ ಕ್ರಮ ವಹಿಸಬೇಕು. ಬೆಂಗಳೂರು ನಗರ ಜಿಲ್ಲೆ ಕೋವಿಡ್ ಲಸಿಕಾಕರಣದಲ್ಲಿ ಮುಂಚೂಣಿಯಲ್ಲಿದೆ. ಇದಕ್ಕಾಗಿ ಎಲ್ಲ ಸಿಬ್ಬಂದಿಗೆ ಧನ್ಯವಾದ ಎಂದರು.
ಮಕ್ಕಳಿಗೆ ಚಿಕಿತ್ಸೆ
ಪ್ರತಿ ಜಿಲ್ಲಾಸ್ಪತ್ರೆಗಳಲ್ಲಿ ಮಕ್ಕಳ ಆರೈಕೆಗಾಗಿ ವಿಶೇಷ ವಿಭಾಗ ಆರಂಭಿಸಲಾಗುತ್ತಿದೆ. ಅದಕ್ಕೆ ಬೇಕಾದ ಮಾನವ ಸಂಪನ್ಮೂಲವನ್ನು ಒದಗಿಸಲಾಗಿದೆ. ಹಲವು ದೇಶಗಳಲ್ಲಿ ಮೂರನೇ ಅಲೆ ಬಂದಿದೆ. ಮೈಮರೆತರೆ ಮೂರನೇ ಅಲೆ ನಾವೇ ಉಂಟುಮಾಡಿದಂತಾಗುತ್ತದೆ. ಧಾರ್ಮಿಕ, ಸಾಮಾಜಿಕ ಚಟುವಟಿಕೆಗಳಿಗೆ ಕಡಿವಾಣ ಹಾಕಿದರೆ ಸೋಂಕು ಹರಡುವುದನ್ನು ತಪ್ಪಿಸಬಹುದು. ಕನಿಷ್ಠ ಶೇ.70 ಜನಸಂಖ್ಯೆಗೆ ಲಸಿಕೆ ನೀಡುವವರೆಗೂ ಎಚ್ಚರ ಅಗತ್ಯ ಎಂದರು.
ಪ್ರಧಾನಿಗಳು ಮುಖ್ಯಮಂತ್ರಿಗಳೊಂದಿಗೆ ಸಭೆ ನಡೆಸಿದ್ದು, ನಮ್ಮ *ಮುಖ್ಯಮಂತ್ರಿಗಳು ದಿನಕ್ಕೆ 5 ಲಕ್ಷ ಲಸಿಕೆಗೆ ಬೇಡಿಕೆ ಇಟ್ಟಿದ್ದಾರೆ.* ಒಂದು ತಿಂಗಳಲ್ಲಿ ಒಂದೂವರೆ ಕೋಟಿ ಜನರಿಗೆ ಲಸಿಕೆ ನೀಡುವ ಗುರಿ ಇದೆ. ಈಗಾಗಲೇ 2.40 ಕೋಟಿಗೂ ಹೆಚ್ಚು ಜನರಿಗೆ ಲಸಿಕೆ ನೀಡಿದ್ದೇವೆ ಎಂದು ಸಿಎಂ ಮನವಿ ಮಾಡಿದ್ದಾರೆ. ಈ ತಿಂಗಳಲ್ಲೇ ಹೆಚ್ಚು ಲಸಿಕೆ ಸಿಗುವ ನಿರೀಕ್ಷೆ ಇದೆ ಎಂದರು.
ಹೆಚ್ಚು ಎಚ್ಚರಿಕೆಯಿಂದಿರಬೇಕೆಂದು ಪ್ರಧಾನಿ ಕಿವಿಮಾತು ಹೇಳಿದ್ದಾರೆ. ಲಸಿಕೆ ಹೆಚ್ಚು ನೀಡಲು ಹಾಗೂ ಕಂಟೇನ್ ಮೆಂಟ್ ನಿಯಮ ಪಾಲಿಸಲು ಸೂಚಿಸಿದ್ದಾರೆ. ಈಗಾಗಲೇ ಮೂಲಸೌಕರ್ಯ ಹೆಚ್ಚಳಕ್ಕೆ 23 ಸಾವಿರ ಕೋಟಿ ರೂ. ಅನ್ನು ಕೇಂದ್ರ ನೀಡಿದೆ. ಇದನ್ನು ಗ್ರಾಮೀಣ ಆರೋಗ್ಯ ಮೂಲಸೌಕರ್ಯ ಹೆಚ್ಚಿಸಲು ಬಳಸಲು ಸಲಹೆ ನೀಡಲಾಗಿದೆ ಎಂದರು.