ಬೆಂಗಳೂರು: ಕೊರೊನಾ ಸಂಭವನೀಯ ಮೂರನೇ ಅಲೆಯನ್ನು ಯಶಸ್ವಿಯಾಗಿ ಮತ್ತು ಪರಿಣಾಮಕಾರಿಯಾಗಿ ಎದುರಿಸಲು ಸರ್ಕಾರ ಎಲ್ಲಾ ತಯಾರಿ ಮಾಡಿಕೊಂಡಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಕೋವಿಡ್ ನಿಯಂತ್ರಣ ಮಾಡಲು ಅಧಿಕಾರಿಗಳಿಗೆ ಹಲವು ಜವಾಬ್ದಾರಿ ಕೊಟ್ಟಿದ್ದೇವೆ. ಎಲ್ಲಾ ಅಧಿಕಾರಿಗಳ ಸಮನ್ವಯ ಕುರಿತು ಸಭೆ ಮಾಡಲಾಗಿದೆ. ಕಳೆದ ಎರಡು ಅಲೆಗಳ ವೇಳೆ ಅನುಭವ ಪಡೆದ ಅಧಿಕಾರಿಗಳು ಈ ಬಾರಿ ಯಾವುದೇ ಲೋಪ ಆಗದಂತೆ ಕೆಲಸ ಮಾಡಲಿದ್ದಾರೆ ಎಂದು ತಿಳಿಸಿದರು.
ವಿಶ್ವ ಆರೋಗ್ಯ ಸಂಸ್ಥೆ, ಒಮೈಕ್ರಾನ್ ವಿಶ್ವದಲ್ಲಿ ಅತೀ ವೇಗವಾಗಿ ಹರಡುವ ಪ್ರಭೇದ ಎಂದು ತಿಳಿಸಿದೆ. ಡೆಲ್ಟಾ ಪ್ರಭೇದದ ರೋಗ ತೀವ್ರತೆ ಹೆಚ್ಚು, ಒಮೈಕ್ರಾನ್ ತೀವ್ರತೆ ಕಡಿಮೆ. ಎರಡು ಡೋಸ್ ಲಸಿಕೆ ಪಡೆದರೆ ಒಮೈಕ್ರಾನ್ ನಿಂದ ತೀವ್ರತರಹ ವ್ಯಾಧಿ ಉಲ್ಬಣವಾಗುವುದಿಲ್ಲ. ಹೀಗಾಗಿ ಎಲ್ಲರೂ ಕಡ್ಡಾಯವಾಗಿ ಎರಡೂ ಡೋಸ್ ಲಸಿಕೆ ಪಡೆಯಬೇಕು ಎಂದು ಹೇಳಿದರು.
ವಿಶ್ವದಲ್ಲಿ 29 ಕೋಟಿಗೂ ಹೆಚ್ಚು ಕೊರೊನಾ ಸೋಂಕಿತರಿದ್ದಾರೆ. ಡಿಸೆಂಬರ್ 27 ರಿಂದ ಜನವರಿ 2ರ ಅವಧಿಯಲ್ಲಿ ಇಡೀ ವಿಶ್ವದಲ್ಲಿ ಸೋಂಕಿತರ ಸಂಖ್ಯೆ 79% ಹೆಚ್ಚಳವಾಗಿದೆ. ಅಮೆರಿಕಾ, ಯುರೋಪ್, ಆಫ್ರಿಕಾ ಸೇರಿದಂತೆ ಹಲವು ದೇಶಗಳಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಳವಾಗಿದೆ. WHO ಪ್ರಕಾರ 2022ರ ಜುಲೈ ವೇಳೆಗೆ ಎಲ್ಲಾ ರಾಷ್ಟ್ರಗಳಲ್ಲೂ 70% ಲಸಿಕಾಕರಣ ಪೂರ್ಣವಾಗಬೇಕು. ಆದರೆ ಈವರೆಗೆ 109 ದೇಶಗಳಲ್ಲಿ 70% ಲಸಿಕೆ ನೀಡಲು ಸಾಧ್ಯವಾಗಿಲ್ಲ. 36 ದೇಶಗಳಲ್ಲಿ 10% ಲಸಿಕಾಕರಣವೂ ಆಗಿಲ್ಲ. ವಿಶ್ವದಾದ್ಯಂತ ICU ನಲ್ಲಿರುವ ಕೊರೊನಾ ರೋಗಿಗಳ ಪೈಕಿ 80% ಜನ ಲಸಿಕೆ ತೆಗೆದುಕೊಳ್ಳದವರಾಗಿದ್ದಾರೆ. ಯಾವ ದೇಶದಲ್ಲಿ ಲಸಿಕೆ ಇಲ್ಲವೋ ಅಲ್ಲಿಗೆ ಲಸಿಕೆ ಸರಬರಾಜು ಮಾಡಲು WHO ಮನವಿ ಮಾಡಿದೆ. ವಿಶ್ವದ ಎಲ್ಲಾ ದೇಶಗಳಲ್ಲಿ ಲಸಿಕಾ ಕಾರ್ಯಕ್ರಮ ಯಶಸ್ವಿಯಾದರೆ ಮಾತ್ರ ಕೊರೊನಾ ಮಣಿಸಬಹುದು. 6 ತಿಂಗಳ ಹಿಂದೆಯೇ ಭಾರತ ಹಲವು ದೇಶಗಳಿಗೆ ಲಸಿಕೆ ಸರಬರಾಜು ಮಾಡಿತ್ತು ಎಂದು ಹೇಳಿದರು.
ರಾಜ್ಯದಲ್ಲಿ ಕೊರೊನಾ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಈಗಾಗಲೇ 99% ಮೊದಲ ಡೋಸ್ ಲಸಿಕೆ ನೀಡಲಾಗಿದೆ. ಎರಡನೇ ಡೋಸ್ ಪಡೆದವರ ಪ್ರಮಾಣ 80% ಇದೆ. ಜನವರಿ 10 ರಿಂದ 60 ವರ್ಷ ಮೇಲ್ಪಟ್ಟ ಅಗತ್ಯ ಇರುವವರಿಗೆ, ಫ್ರಂಟ್ ಲೈನ್ ವರ್ಕರ್ ಗಳಿಗೆ ಬೂಸ್ಟರ್ ಡೋಸ್ ನೀಡಲಾಗುವುದು. 15-18 ವರ್ಷಗಳ ಮಕ್ಕಳ ಲಸಿಕಾ ಕಾರ್ಯಕ್ರಮವೂ ವೇಗವಾಗಿ ನಡೆಯುತ್ತಿದೆ. ಭಾರತ 150 ಕೋಟಿ ಡೋಸ್ ಲಸಿಕೆ ನೀಡಿ ಮೈಲುಗಲ್ಲು ಸ್ಥಾಪಿಸಿದೆ. ಕೊರೊನಾ ವಿರುದ್ಧ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳು ಹೇಗೆ ಕೆಲಸ ಮಾಡುತ್ತಿವೆ ಅನ್ನುವುದಕ್ಕೆ ಇದು ಉದಾಹರಣೆ ಎಂದರು.