ಬೀದರ್: ಸರ್ಕಾರ ಬಡವರ ವಿಚಾರದಲ್ಲಿ ಸಂಪೂರ್ಣ ಸಂವೇದನೆ ಕಳೆದುಕೊಂಡಿದೆ, ಬಡವರ ಪ್ರಾಣಕ್ಕೆ ಮೂರು ಕಾಸಿನ ಬೆಲೆ ನೀಡುತ್ತಿಲ್ಲ ಎಂಬುದಕ್ಕೆ ಆಹಾರ ಸಚಿವ ಉಮೇಶ್ ಕತ್ತಿ ಇವರ ಇಂದಿನ ದರ್ಪ, ದುರಹಂಕಾರದ ಹೇಳಿಕೆಯೇ ಸಾಕ್ಷಿಯಾಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಪ್ರತ್ರಿಕ್ರಿಯೆ ನೀಡಿದ್ದಾರೆ.
ಜನ ಕೊರೊನಾ ಸಂಕಷ್ಟದಿಂದ ನಲುಗಿ ಹೋಗಿದ್ದಾರೆ. ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಕೊರೊನಾ ನಿಯಂತ್ರಿಸಲು ಸರ್ಕಾರ ಅಧಿಕೃತ ಲಾಕ್ ಡೌನ್ ಘೋಷಿಸದೆ, ಕಠಿಣ ಕ್ರಮದ ಹೆಸರಲ್ಲಿ ಲಾಕ್ ಡೌನ್ ಮಾಡುತ್ತಿದೆ. ಇದರಿಂದ ಕೂಲಿ ಕಾರ್ಮಿಕರು, ಬಡವರು, ಅಂದು ದುಡಿದು ಅಂದೇ ತಿನ್ನುವ ಕಡು ಬಡವರು ತುತ್ತಿನ ಚೀಲ ತುಂಬಿಕೊಳ್ಳಲಾರದೆ ಹಸಿವಿನಿಂದ ನರಳುತ್ತಿದ್ದಾರೆ ಎಂದು ಈಶ್ವರ ಖಂಡ್ರೆ ದೂರಿದ್ದಾರೆ.
ಕಾಂಗ್ರೆಸ್ ಪಕ್ಷ ಲಾಕ್ ಡೌನ್ ವೇಳೆ ಬಡಜನರ ಖಾತೆಗೆ ಹಣ ಹಾಕಬೇಕು ಎಂದು ಒತ್ತಾಯಿಸಿತ್ತು. ಈ ಹಿಂದೆ ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರ ಬಡ ಜನರಿಗೆ 7 ಕೆಜಿ ಅಕ್ಕಿ ನೀಡುತ್ತಿತ್ತು. ಆದರೆ ಬಿಜೆಪಿ ಸರ್ಕಾರ 2 ಕೆಜಿಗೆ ಇಳಿಸಿದೆ. ಈ ಕೊರೊನಾ ಲಾಕ್ ಡೌನ್ ಕಾಲದಲ್ಲಾದರೂ ಪ್ರತಿ ಎನ್.ಎಫ್.ಎಸ್.ಎ. ಫಲಾನುಭವಿಗಳಿಗೆ, ಪಡಿತರ ಚೀಟಿದಾರರಿಗೆ 7 ಕೆಜಿ ಅಕ್ಕಿ ನೀಡಿದರೆ ಅವರು ಹಸಿವಿನಿಂದ ಬಳಲುವುದು ತಪ್ಪುತ್ತದೆ. ಈ ಬಗ್ಗೆ ರೈತ ಸಂಘದ ಮುಖಂಡರೊಬ್ಬರು ಕರೆ ಮಾಡಿ ಉಮೇಶ್ ಕತ್ತಿ ಅವರಿಗೆ ಕೇಳಿದಾಗ ಬಡವರು ಸಾಯುವುದೇ ಉತ್ತಮ ಎಂಬ ಉತ್ತರ ನೀಡಿರುವುದು ನಿಜಕ್ಕೂ ದುರಹಂಕಾರದ ಪರಮಾವಧಿಯಾಗಿದೆ.
ಬಡ ಜನರ ಬಗ್ಗೆ ಕಿಂಚಿತ್ತೂ ಕಾಳಜಿ, ಸಂವೇದನೆ ಇಲ್ಲದ ಇಂಥ ಸರ್ಕಾರ ಇದ್ದರೂ ಒಂದೇ ಹೋದರೂ ಒಂದೆ. ಆಡಳಿತ ನಡೆಸುವ ಯೋಗ್ಯತೆ ಇಲ್ಲದಿದ್ದರೆ ರಾಜೀನಾಮೆ ಕೊಟ್ಟು ರಾಜ್ಯವನ್ನು ಉಳಿಸುವುದು ಉತ್ತಮ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.