ಮಂಗಳೂರು: ರಾಜ್ಯದ ಎಲ್ಲ ಆಸ್ಪತ್ರೆಗಳಲ್ಲಿ ವೈದ್ಯರ ಖಾಲಿ ಹುದ್ದೆ ತುಂಬಿ ಕೊರತೆಯಾಗದಂತೆ ಕ್ರಮ ವಹಿಸಲಾಗಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆ ಚಾರ್ಮಾಡಿಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ಹೊಸ ಕಟ್ಟಡ ಹಾಗೂ ಕೊಕ್ಕಡದಲ್ಲಿ ಸಮುದಾಯ ಆರೋಗ್ಯ ಕೇಂದ್ರದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸರ್ಕಾರ ಆರೋಗ್ಯ ಕ್ಷೇತ್ರಕ್ಕೆ ಒತ್ತು ನೀಡಿದ್ದು, ಪ್ರಾಥಮಿಕ, ಸಮುದಾಯ ಆರೋಗ್ಯ ಕೇಂದ್ರಗಳನ್ನು ಮೇಲ್ದರ್ಜೆಗೇರಿಸಲಾಗುತ್ತಿದೆ. 250 ಪಿಎಚ್ ಸಿಗಳನ್ನು ಪ್ರಾಯೋಗಿಕವಾಗಿ ಮೇಲ್ದರ್ಜೆಗೇರಿಸಿ ಗ್ರಾಮೀಣ ಪ್ರದೇಶದ ಪ್ರತಿಯೊಬ್ಬರಿಗೂ ಆರೋಗ್ಯ ಸವಲತ್ತುಗಳನ್ನು ನೀಡುವ ಉದ್ದೇಶವಿದೆ. ಆಸ್ಪತ್ರೆಗಳ ಖಾಲಿ ಹುದ್ದೆ ತುಂಬಲು 1,763 ವೈದ್ಯರು ಹಾಗೂ ವೈದ್ಯಾಧಿಕಾರಿಗಳನ್ನು ನೇಮಕ ಮಾಡಲಾಗಿದೆ. ನಂತರ ಗುತ್ತಿಗೆ ಆಧಾರದಲ್ಲಿ ಒಂದು ವರ್ಷ ಕಡ್ಡಾಯ ಸೇವೆಯಡಿ 2,050 ವೈದ್ಯರ ನೇಮಕವಾಗಿದೆ. ಈ ಪೈಕಿ ಕನ್ನಡ ಜಿಲ್ಲೆಗೆ 26 ವೈದ್ಯರನ್ನು ನೀಡಲಾಗಿದೆ. ಹೊಸ ನೇಮಕಾತಿಯಲ್ಲಿ, 18 ತಜ್ಞರು, 40 ಸಾಮಾನ್ಯ ಕರ್ತವ್ಯ ವೈದ್ಯಾಧಿಕಾರಿಗಳನ್ನು ದಕ್ಷಿಣ ಕನ್ನಡದ ಆಸ್ಪತ್ರೆಗಳಲ್ಲಿ ನೇಮಿಸಲಾಗಿದೆ. ಈ ಮೂಲಕ ರಾಜ್ಯದ ಪ್ರತಿ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರ ಕೊರತೆಯಾಗದಂತೆ ಕ್ರಮ ವಹಿಸಲಾಗಿದೆ ಎಂದರು.
ಕೊಕ್ಕಡದಲ್ಲಿ 30 ಹಾಸಿಗೆಗಳ 4.8 ಕೋಟಿ ರೂ. ವೆಚ್ಚದ ಸಮುದಾಯ ಆರೋಗ್ಯ ಕೇಂದ್ರ ಉದ್ಘಾಟಿಸಲಾಗಿದೆ. ಇಲ್ಲಿಗೆ ಬೇಕಾದ ಸಲಕರಣೆಗಳನ್ನು ಒದಗಿಸಲಾಗುವುದು. ಕೆಐಒಸಿಎಲ್ ಸಂಸ್ಥೆಯಿಂದ ಹಾಸಿಗೆಗಳನ್ನು ಇಲ್ಲಿಗೆ ನೀಡಲಾಗಿದೆ. ಉತ್ತಮ ಗುಣಮಟ್ಟದ ಚಿಕಿತ್ಸೆಯನ್ನು ಬಡವರು ಇಲ್ಲಿ ಪಡೆಯಬಹುದು ಎಂದು ತಿಳಿಸಿದರು.
ಸಂಭವನೀಯ ಕೋವಿಡ್ 3 ನೇ ಅಲೆಗೆ ಪೂರಕವಾಗಿ ರಾಜ್ಯದಲ್ಲಿ 153 ಮಕ್ಕಳ ತಜ್ಞರನ್ನು ನೇಮಿಸಲಾಗಿದೆ. ತಾಲೂಕು ಆಸ್ಪತ್ರೆಗಳಿಗೆ ಕಳುಹಿಸಿರುವ ವೈದ್ಯರಿಗೆ ಮಕ್ಕಳ ಚಿಕಿತ್ಸೆ ಕುರಿತು ತರಬೇತಿ ನೀಡಲಾಗುವುದು. ನರ್ಸ್ ಹಾಗೂ ಅರೆ ವೈದ್ಯಕೀಯ ಸಿಬ್ಬಂದಿಯನ್ನು ನೇಮಿಸಲಾಗುತ್ತಿದೆ. ಜೊತೆಗೆ ಲಸಿಕಾಕರಣವೂ ಉತ್ತಮವಾಗಿ ನಡೆಯುತ್ತಿದೆ. ದಕ್ಷಿಣ ಕನ್ನಡದಲ್ಲೂ ಉತ್ತಮವಾಗಿ ನಡೆದಿದೆ. ಕೆಲ ದಿನಗಳಿಂದ ಲಸಿಕಾ ಅಭಿಯಾನ ಮಂದಗತಿಯಲ್ಲಿ ಸಾಗಿದೆ. ಮುಂದಿನ ತಿಂಗಳಿಂದ ಹೆಚ್ಚು ಲಸಿಕೆ ಕಳುಹಿಸಿಕೊಡಲಾಗುವುದು ಎಂದು ಕೇಂದ್ರ ಆರೋಗ್ಯ ಸಚಿವರು ತಿಳಿಸಿದ್ದಾರೆ ಎಂದರು.
ಶಾಲೆ, ಆರೋಗ್ಯ ಕೇಂದ್ರಗಳು ಗ್ರಾಮೀಣ ಪ್ರದೇಶಗಳಿಗೆ ಅಗತ್ಯವಾಗಿದೆ. ಜಿಲ್ಲೆಯಲ್ಲಿ ನರೇಗಾ ಯೋಜನೆಯಡಿ 32 ಪ್ರಾಥಮಿಕ ಆರೋಗ್ಯ ಕೇಂದ್ರಗಳ ಕಾಂಪೌಂಡ್ ನಿರ್ಮಾಣ ನಡೆಯುತ್ತಿದೆ. ಮುಂದಿನ ವರ್ಷವೂ ಉಳಿದ ಕಾಮಗಾರಿ ನಡೆಯಲಿದೆ ಎಂದರು.
ಎಂಡೋಸಲ್ಫಾನ್ ಸಂತ್ರಸ್ತರಿಗೆ ಸೌಲಭ್ಯ
ಎಂಡೋಸಲ್ಫಾನ್ ನಿಂದ ಜನರು ತೊಂದರೆಗೊಳಗಾಗಿದ್ದಾರೆ. 60% ಕ್ಕಿಂತ ಹೆಚ್ಚು ಅಂಗವೈಕಲ್ಯ ಇರುವವರಿಗೆ ತಿಂಗಳಿಗೆ 3,000 ರೂ. ನೀಡಲಾಗುತ್ತಿದೆ. 59% ವರೆಗೆ ಒಂದೂವರೆ ಸಾವಿರ, 25% ಗಿಂತ ಕಡಿಮೆ ಇರುವವರಿಗೆ ಕೆಲ ರಿಯಾಯಿತಿ ಸೌಲಭ್ಯ ನೀಡಲಾಗುತ್ತಿದೆ. ಸಂಕಷ್ಟದಲ್ಲಿರುವ ಸಂತ್ರಸ್ತರಿಗೆ ಇನ್ನೂ ಹೆಚ್ಚಿನ ಸೌಲಭ್ಯ ನೀಡಲು ಯತ್ನಿಸಲಾಗುವುದು ಎಂದರು.
ರಾಷ್ಟ್ರೀಯ ಆರೋಗ್ಯ ಅಭಿಯಾನ ಒಂದು ಕಾರ್ಯಕ್ರಮವಾಗಿದೆ. ಇದು ಕೆಲ ವರ್ಷಗಳವರೆಗೆ ಇದ್ದು, ನಂತರ ಮುಗಿಯುತ್ತದೆ. ಇದರಡಿ ಕೆಲಸಕ್ಕೆ ನೇಮಕ ಮಾಡುವಾಗಲೇ ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಲಾಗಿದೆ. ಅದರಲ್ಲಿ ಶಾಶ್ವತ ನೇಮಕ ಕಷ್ಟವಾಗುತ್ತದೆ. ಇದರಲ್ಲಿ ಶೇ.60 ಕೇಂದ್ರ ಹಾಗೂ ರಾಜ್ಯ ಶೇ.40 ಅನುದಾನ ನೀಡುತ್ತದೆ ಎಂದರು.