ಬೆಂಗಳೂರು: ರಾಜ್ಯ ಬಿಜೆಪಿ ಸರ್ಕಾರ ಮಂಡಿಸಿದ 2022-2023ರ ಬಜೆಟ್ *ದೂರದೃಷ್ಟಿಯ ಬಜೆಟ್* ಆಗಿದೆ. ಬಜೆಟ್ ಕೇವಲ ಘೋಷಣೆಯಾಗದೆ *ಜನಸಾಮಾನ್ಯರ ಬಜೆಟ್* ಆಗಿದೆ. ತಮ್ಮ ಚೊಚ್ಚಲ ಬಜೆಟ್ ಮಂಡನೆಯಲ್ಲಿ ಕಾಮನ್ ಮ್ಯಾನ್ ಸಿಎಂ ರಿಂದ ಕಾಮನ್ ಮ್ಯಾನ್ ಬಜೆಟ್ ಸಿಕ್ಕಿದೆ, ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ನವ ಭಾರತಕ್ಕಾಗಿ ನವ ಕರ್ನಾಟಕ ಅನ್ನುವ ಕಲ್ಪನೆಯೊಂದಿಗೆ ಈ ಸಾಲಿನ ಬಜೆಟ್ ಮಂಡಿಸಿದ್ದಾರೆ. ಸಮಾಜದ ಎಲ್ಲಾ ವರ್ಗಗಳನ್ನು, ಎಲ್ಲ ಕ್ಷೇತ್ರಗಳನ್ನು, ರಾಜ್ಯದ ಎಲ್ಲಾ ಪ್ರಾದೇಶಿಕ ಭಾಗಗಳ ಜನರ ಆಶೋತ್ತರಗಳನ್ನು ಮುಟ್ಟುವಂತಹ ಸರ್ವ ಸ್ಪರ್ಶಿ, ಸರ್ವ ವ್ಯಾಪಿ ಬಜೆಟ್ ಇದಾಗಿದೆ. ಆರೋಗ್ಯ, ಶಿಕ್ಷಣ, ಕೃಷಿ ಸೇರಿದಂತೆ ಮೂಲಕ ಸೌಕರ್ಯಗಳಿಗೆ ಒತ್ತುಕೊಟ್ಟು ಬಜೆಟ್ ರೂಪಿಸಲಾಗಿದೆ ಎಂದು ಹೇಳಿದರು.
2 ಲಕ್ಷದ 53 ಸಾವಿರದ 165 ಲಕ್ಷ ಕೋಟಿ ಗಾತ್ರದ ಬಜೆಟ್ ಇದಾಗಿದ್ದು ಸರ್ವಸ್ಪರ್ಶಿ ಬಜೆಟ್ ಇದಾಗಿದೆ. ರಾಜ್ಯದ ಅಭಿವೃದ್ಧಿಗೆ ಶಿಕ್ಷಣ, ಉದ್ಯೋಗ ಮತ್ತು ಸಬಲೀಕರಣವೊಂದೇ ದಾರಿ ಅನ್ನುವುದನ್ನ ಬಜೆಟ್ ಹೇಳಿದೆ. ರಾಜ್ಯದ ನೀರಾವರಿ ಯೋಜನೆಗಳಿಗೆ ಬಜೆಟ್ನಲ್ಲಿ ಬರಪೂರ ಅನುದಾನ ಸಿಕ್ಕಿದೆ. ಮೇಕೆದಾಟು ಯೋಜನೆಗೆ 1000 ಸಾವಿರ ಕೋಟಿ, ಕೃಷ್ಣಾ ಮೇಲ್ದಂಡೆ ಯೋಜನೆಗೆ 5000 ಕೋಟಿ ಹಾಗೂ ಎತ್ತಿನ ಹೊಳೆ ಯೋಜನೆಗೆ 3000 ಕೋಟಿ ನೀಡುವ ಮೂಲಕ ನೀರಾವರಿ ಮೂಲಸೌಕರ್ಯಕ್ಕೆ ಒತ್ತು ನೀಡಲಾಗಿದೆ ಎಂದು ಹೇಳಿದರು. ಎತ್ತಿನ ಹೊಳೆ ಯೋಜನೆ ಮೂಲಕ ಕೋಲಾರ, ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾಂತರ ಭಾಗದ ಜನರ ನೀರಿನ ಬವಣೆ ತೀರಿಸಲು ಸರ್ಕಾರ ಯೋಜನೆ ರೂಪಿಸಿ ಅನುದಾನ ನೀಡಿದೆ.
ದುರ್ಬಲ ವರ್ಗದ ರಕ್ಷಣೆ ಮತ್ತು ಏಳಿಗೆ – ಶಿಕ್ಷಣ, ಉದ್ಯೋಗ, ಆರೋಗ್ಯ ಹಾಗೂ ಸಬಲೀಕರಣ ಕಾರ್ಯಕ್ರಮ. ಹಿಂದುಳಿದ ಪ್ರದೇಶಗಳನ್ನು ವೈಜ್ಞಾನಿಕವಾಗಿ ಗುರುತಿಸಿ ಅಭಿವೃದ್ಧಿಗೆ ಸಂಘಟಿತ ಕಾರ್ಯಕ್ರಮ, ಕೃಷಿ, ಕೈಗಾರಿಕೆ ಹಾಗೂ ಸೇವಾ ವಲಯ – ಪಾಲುದಾರಿಕೆಯೊಂದಿಗೆ ಅಭಿವೃದ್ಧಿ, ನವಭಾರತಕ್ಕಾಗಿ ನವ ಕರ್ನಾಟಕ ಹೊಸ ಚಿಂತನೆ ಹಾಗೂ ಹೊಸ ಚೈತನ್ಯದ ಜೊತೆ ಹೊಸ ಮುನ್ನೋಟಕ್ಕೆ ಬಜೆಟ್ ನಾಂದಿ ಹಾಡಿದೆ ಎಂದು ಹೇಳಿದರು.
ರಸ್ತೆಗಳ ಅಭಿವೃದ್ಧಿ, ಹಲವು ಆರೋಗ್ಯ ಯೋಜನೆಗಳು, ಆಸ್ಪತ್ರೆಗಳನ್ನು ಮೇಲ್ದರ್ಜೆಗೆ ಏರಿಸುವ ಪ್ರಸ್ತಾವನೆ, ಆಶಾ ಕಾರ್ಯಕರ್ತೆರ ಗೌರವ ಧನ ಹೆಚ್ಚಳ ಮಾಡಿ ಆರೋಗ್ಯ ಕರ್ನಾಟಕದ ಕಡೆಯೂ ಗಮನ ಕೊಡಲಾಗಿದೆ. ಹುಬ್ಬಳ್ಳಿಯಲ್ಲಿ ಜಯದೇವ ಹೃದ್ರೋಗ ಆಸ್ಪತ್ರೆಯ ಪ್ರಾದೇಶಿಕ ಕೇಂದ್ರ ಸ್ಥಾಪನೆ ಮೂಲಕ ಉತ್ತರ ಕರ್ನಾಟಕ ಭಾಗದ ಹೃದ್ರೋಗ ಸಂಬಂಧ ಕಾಯಿಲೆಗಳಿಗೆ ಅಲ್ಲೇ ಚಿಕಿತ್ಸೆ ಸಿಗುವಂತೆ ಮಾಡುವ ಯೋಜನೆ ರೂಪಿಸಲಾಗಿದೆ. ಬೆಳಗಾವಿಯಲ್ಲಿ ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆಯ ಪ್ರಾದೇಶಿಕ ಕೇಂದ್ರವೂ ಸ್ಥಾಪನೆಯಾಗಲಿದೆ. ರಾಜ್ಯದಲ್ಲಿ ನಮ್ಮ ಕ್ಲಿನಿಕ್ ಸ್ಥಾಪನೆ ಮಾಡಿ, ಸಾಂಕ್ರಾಮಿಕವಲ್ಲದ ರೋಗಗಳಿಗೆ ನಮ್ಮ ಕ್ಲಿನಿಕ್ನಲ್ಲಿ ಚಿಕಿತ್ಸೆ ಕೊಡಿಸಲು ಯೋಜನೆ ರೂಪಿಸಲಾಗಿದೆ ಎಂದು ಹೇಳಿದರು.
ಪ್ರಧಾನಿ ನರೇಂದ್ರ ಮೋದಿಯವರು ಅಭಿವೃದ್ಧಿ ಪಡಿಸಿರುವ ದಿವ್ಯ ಭವ್ಯ ಕಾಶಿಗೆ ಭೇಟಿ ನೀಡಿ, ವಿಶ್ವನಾಥನ ಕೃಪೆಗೆ ಪಾತ್ರವಾಗೇಕು ಅನ್ನುವವರಿಗೂ ಬಜೆಟ್ ಮೂಲಕ ನೆರವು ಸಿಕ್ಕಿದೆ. ಕಾಶಿ ಯಾತ್ರೆ ಮಾಡುವ 30 ಸಾವಿರ ಯಾತ್ರಾರ್ಥಿಗಳಿಗೆ 5 ಸಾವಿರ ರೂಪಾಯಿಗಳ ಸಹಾಯಧನ ಸಿಗಲಿದೆ. ಪರ್ವತಮಾಲಾ ಯೋಜನೆಯಡಿ ಚಾಮುಂಡಿ ಬೆಟ್ಟ ಮತ್ತು ದತ್ತಪೀಠದಲ್ಲಿ ರೋಪ್ ವೇ ನಿರ್ಮಾಣಕ್ಕೆ ಕೇಂದ್ರಕ್ಕೆ ಪ್ರಸ್ತಾವನೆ, ಅಂಜನಾದ್ರಿ ಬೆಟ್ಟದ ಅಭಿವೃದ್ಧಿಗೆ 100 ಕೋಟಿ ರೂ ಮೀಸಲಾಗಿಡುವುದು. ನಂದಿ ಬೆಟ್ಟದಲ್ಲಿ 93 ಕೋಟಿ ವೆಚ್ಚದಲ್ಲಿ ರೋಪ್ ವೇ ನಿರ್ಮಾಣದಂತಹ ಕಾರ್ಯಗಳಿಗೆ ಯೋಜನೆ ರೂಪಿಸಲಾಗಿದೆ.
ರೈತರಿಗೂ ಬಜೆಟ್’ನಲ್ಲಿ ವಿಶೇಷ ಯೋಜನೆಗಳನ್ನು ರೂಪಿಸಲಾಗಿದೆ. ರೈತಶಕ್ತಿ ಯೋಜನೆ ಮೂಲಕ ಯಂತ್ರೋಪಕರಣಗಳ ಖರೀದಿಗೆ ಉತ್ತೇಜನ ನೀಡಲಾಗುತ್ತದೆ. ಕೆಪೆಕ್ ಮೂಲಕ ಕೃಷಿ ಉತ್ಪನ್ನಗಳ ಕೊಯ್ಲಿನೋತ್ತರ ನಿರ್ವಹಣೆ, ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಪಿಪಿಪಿ ಮಾದರಿಯಲ್ಲಿ ಮಿನಿ ಆಹಾರ ಪಾರ್ಕ್ ಸ್ಥಾಪನೆ ಯಂತಹ ಕಾರ್ಯಗಳನ್ನುಕೈಗೊಳ್ಳಲು ಯೋಜನೆ ರೂಪಿಸಲಾಗಿದೆ. ಪ್ರವಾಸೋದ್ಯಮ ಹಾಗೂ ಶಿಕ್ಷಣಕ್ಕೂ ಬಜೆಟ್ನಲ್ಲಿ ಒತ್ತು ನೀಡಲಾಗಿದೆ ಎಂದರು.
ದುರ್ಬಲ ವರ್ಗಗಳ ಸಬಲೀಕರಣಕ್ಕೆ ಬಜೆಟ್ನಲ್ಲಿ ಒತ್ತು ನೀಡಲಾಗಿದೆ. ಸ್ವಸಹಾಯ ಸಂಘಗಳ ಮೂಲಕ ಮಹಿಳೆಯರಿಗೆ ಉದ್ಯೋಗ ನೀಡುವ ಮೂಲಕ ಸ್ವತಂತ್ರ ಬದುಕಿನ ಕನಸು ಕಟ್ಟಿಕೊಳ್ಳಲು ಯೋಜನೆ ರೂಪಿಸಲಾಗಿದೆ. ಸ್ಮಾರ್ಟ್ ಕ್ಲಾಸ್ ಹಾಗೂ ಕಂಪ್ಯೂಟರ್ ಗಳ ಮೂಲಕ ಕಲಿಕೆ ಪ್ರೋತ್ಸಾಹ ನೀಡಲು ಕೂಡ ಬಜೆಟ್ನಲ್ಲಿ ಯೋಜನೆ ಹಾಗೂ ಅನುದಾನ ನೀಡಲಾಗಿದೆ ಎಂದು ಹೇಳಿದರು.
ಚುನಾವಣೆ ಹತ್ತಿರದಲ್ಲೇ ಇದ್ದರೂ ಇದು ಒಲೈಕೆ ಬಜೆಟ್ ಆಗಿಲ್ಲ. ಅಷ್ಟೇ ಅಲ್ಲದೆ ಯಾವುದೋ ಒಂದು ವರ್ಗಕ್ಕೆ ಅನುಕೂಲ ಮಾಡಿಕೊಡುವ ಬಜೆಟ್ ಕೂಡ ಅಲ್ಲ. ರಾಜ್ಯದ ಸರ್ವಾಂಗೀಣ ಅಭಿವೃದ್ಧಿಯ, ಸರ್ತೋಮುಖ ವಿಕಾಸದ ಕನಸು ಹೊತ್ತ ಬಜೆಟ್ ಇದು ಎಂದು ಹೇಳಿದರು.