ಬೆಂಗಳೂರು: ತಮ್ಮನ್ನು ಪದೇಪದೆ ಕೆಣಕುತ್ತಿರುವ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ತಿರುಗೇಟು ಕೊಟ್ಟಿರುವ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು; ಪ್ರತಿಪಕ್ಷ ನಾಯಕರಿಗೆ ನಾಲ್ಕು ನೇರ ಪ್ರಶ್ನೆಗಳನ್ನು ಕೇಳಿದ್ದಾರೆ.
ಮಂಡ್ಯದಲ್ಲಿ ತಮ್ಮ ಬಗ್ಗೆ ಹೇಳಿಕೆ ನೀಡಿರುವ ಸಿದ್ದರಾಮಯ್ಯ ವಿರುದ್ಧ ಟ್ವಿಟರ್ ನಲ್ಲಿ ಮಾಜಿ ಮುಖ್ಯಮಂತ್ರಿಗಳು ಟೀಕಾಪ್ರಹಾರ ನಡೆಸಿದ್ದಾರೆ. ಆಪರೇಷನ್ ಕಮಲವೆಂಬ ಅನೈತಿಕ ಕೂಸಿನ ಬೇನಾಮಿ ಅಪ್ಪ, ಆ ಪಾಪಕ್ಕೆ ಪ್ರತಿಯಾಗಿ ಪಡೆದ ಫಲದ ಬಗ್ಗೆ ಪಲಾಯನವೇಕೆ ಸುಳ್ಳುರಾಮಯ್ಯ? ಕಳ್ಳಮಾಲು ಹ್ಯೂಬ್ಲೆಟ್ ವಾಚಿನ ಬಗ್ಗೆ ವಾಕರಿಕೆ ಬರುವಷ್ಟು ಹೇಸಿಗೆ ಕಥೆಗಳೇ ಇವೆ. ಇವೆರಡೂ ಪ್ರಶ್ನೆಗಳಿಗೂ ಉತ್ತರಿಸುತ್ತಿಲ್ಲ, ಯಾಕಯ್ಯಾ? ಎಂದು ಪ್ರಶ್ನಿಸಿದ್ದಾರೆ.
ಈಶ್ವರಪ್ಪ ಬಗ್ಗೆ ಮಾತನಾಡಿ, ಅಭ್ಯಂತರವಿಲ್ಲ. ಡಿವೈಎಸ್ಪಿ ಗಣಪತಿ ಬಗ್ಗೆಯೂ ಹೇಳಿ, ಬೇಜಾರಿಲ್ಲ. ಆದರೆ; ಕಲ್ಲಪ್ಪ ಹಂಡೀಭಾಗ್ ಬಗ್ಗೆ ಮಾತನಾಡಿದರೆ ನಿಮ್ಮ ಜಾಣ ಮೌನವೇಕೆ? ಆ ಪಾಪಕ್ಕೆ ಪ್ರಾಯಶ್ಚಿತ್ತ ಅನುಭವಿದೇ ವಿಧಿಯೇ ಇಲ್ಲ. ಪ್ರಾಮಾಣಿಕ ಅಧಿಕಾರಿಯ ದುರಂತ ಅಂತ್ಯ ನಿಮ್ಮನ್ನು ಸುಮ್ಮನೆ ಬಿಡಲ್ಲ ಎಂದಿರುವ ಅವರು, ಮಂಡ್ಯದಲ್ಲಿ ಜೆಡಿಎಸ್ ಬಗ್ಗೆ ಸುಳ್ಳು ಹೇಳಿದ್ದೀರಿ. ನಾಚಿಕೆ ಆಗುವುದಿಲ್ಲವೇ ನಿಮಗೆ? ನಿಮ್ಮ 5 ವರ್ಷಗಳ ದುರಾಡಳಿತದಲ್ಲಿ ಆ ಜಿಲ್ಲೆಯೊಂದರಲ್ಲೇ 200 ರೈತರು ಆತ್ಮಹತ್ಯೆಗೆ ಶರಣಾದರು. ಮೈಷುಗರ್ ಕಾರ್ಖಾನೆ ಮುಚ್ಚಿಸಿ ಕಬ್ಬು ಬೆಳೆಗಾರರ ಮನೆ ಹಾಳು ಮಾಡಿದಿರಿ ಎಂದು ಸಿಟ್ಟು ಹೊರಹಾಕಿದ್ದಾರೆ.
ಮಂಡ್ಯದಲ್ಲಿ ಏಳೂ ಸೀಟು ಸಿಗಲಿಲ್ಲ ಎಂದು ಜನರ ಮುಂದೆ ಹಲುಬುತ್ತೀರಿ. 200 ಅನ್ನದಾತರ ಜೀವಕ್ಕೆ ಎರವಾಗಿ, ಇಡೀ ಜಿಲ್ಲೆಯಲ್ಲಿ ಮರಣಮೃದಂಗ ಭಾರಿಸಿದ ನಿಮ್ಮ ರೈತವಿರೋಧಿ ನೀತಿಗಳು ಕಸಿದ ಜೀವಗಳ ಲೆಕ್ಕವೆಲ್ಲಾ ಚುಕ್ತಾ ಆಗುವ ಕಾಲ ಬಂದಿದೆ. ಜೀವ ತೆಗೆಯುವ ಜವರಾಯನ ಅವತಾರವೇ ನೀವಾಗಿರುವಾಗ ನಮ್ಮ ಕಣ್ಣೀರನ್ನು ಹಂಗಿಸುತ್ತೀರಿ ಎಂದಿರುವ ಅವರು, ಆಪರೇಷನ್ ಕಮಲದಿಂದ ನಿಮ್ಮ ಜೇಬು ಸೇರಿದ ಆಕರ್ಷಕ ಅಂಕಿಯ ಹಣದ ಅಸಲೀಯೆತ್ತು ನನಗೂ ಗೊತ್ತು! ನೀವು ರಾಜ್ಯ ಕಂಡ ಗ್ರೇಟ್ ಹಣಕಾಸು ಮಂತ್ರಿ, ಪ್ಲಸ್ಸೂ ಮೈನಸ್ಸಿನ ಪ್ರವೀಣ, ಪರ್ಸಂಟೇಜ್ ಪಿತಾಮಹನಷ್ಟೇ ಅಲ್ಲ.. ಅನೈತಿಕ ರಾಜಕಾರಣದ ಅಸಲಿ ಅಪ್ಪ ಎಂದು ಟೀಕಿಸಿದ್ದಾರೆ.
ಈಗ ಹೇಳಿ? ಉಂಡ ಮನೆಗೆ ಮೂರು ಬಗೆದ ನೈಜ ಕಳ್ಳ ಯಾರು? ಮಿಸ್ಟರ್ ಸುಳ್ಳುರಾಮಯ್ಯ.. ದಿನಕ್ಕಿಷ್ಟು ಸುಳ್ಳು, ಕ್ಷಣಕ್ಕೊಂದು ಪೊಳ್ಳು; ಇದು ನಿಮ್ಮ ಜೀವನಶೈಲಿ. ಅದಕ್ಕೇ ನೀವು ರಾಜಕೀಯ ಊಸರವಳ್ಳಿ. ಮೈಯ್ಯಲ್ಲಾ ಸುಳ್ಳನ್ನೇ ಮೆತ್ತಿಕೊಂಡು ಕಂಡೋರ ಮೇಲೆ ಸಿಡಿಸುವ ನಿಮ್ಮ ʼಸಿದ್ದಸೂತ್ರʼಕ್ಕೆ ಕೊನೆಗಾಲ ಹತ್ತಿರದಲ್ಲೇ ಇದೆ ಎಂದಿರುವ ಹೆಚ್ಡಿಕೆ, ನಾವು ಜಲಧಾರೆ ಮಾಡುತ್ತಿದ್ದೇವೆ, ನಿಜ. ನೀರಾವರಿ ಯೋಜನೆಗಳ ಬಗ್ಗೆ ನಮಗೆ ಸ್ಪಷ್ಟತೆ ಇದೆ. ಈ ರಾಜ್ಯಕ್ಕೆ ಹೆಚ್.ಡಿ.ದೇವೇಗೌಡರು ಕೊಟ್ಟ ಕೊಡುಗೆ ಕಣ್ಮುಂದೆಯೇ ಇದೆ. 1962ರಿಂದ ಅವರು ನಡೆಸಿದ ಹೊರಾಟದ ಬಗ್ಗೆ ತಿಳಿದು ಮಾತನಾಡಿ. ಅರಿವುಗೆಟ್ಟ ಹೇಳಿಕೆ ಕೊಟ್ಟು ಅಪಹಾಸ್ಯಕ್ಕೆ ಗುರಿಯಾಗಬೇಡಿ ಎಂದಿದ್ದಾರಲ್ಲದೆ, ಬಿಜೆಪಿ ಬಗ್ಗೆ ನಿಮ್ಮ ವಾದಸರಣಿ ಅದ್ಭುತಃ!! ನಿಮ್ಮ ಪಾಲಿಗೆ ಆ ಪಕ್ಷ ಹೊರಗಷ್ಟೇ ಕೋಮುವಾದಿ! ಹಣದ ವಿಷಯ ಎಂದಾಗ ಒಳಗೆಲ್ಲಾ ಅನುಕೂಲವಾದಿ ಎಂದು ಟೀಕಿಸಿದ್ದಾರೆ.
ಸ್ವಯಂ ಘೋಷಿತ ಸಂವಿಧಾನ ತಜ್ಞ, ಸ್ವಯಂ ಘೋಷಿತ ಸತ್ಯ ಹರಿಶ್ಚಂದ್ರ, ಈಗ ಹೇಳಿ?
ಕಾಂಗ್ರೆಸ್ ಕಚೇರಿಯಲ್ಲೇ ಕಾರ್ಯಕರ್ತರ ಸಾಕ್ಷಿಯಾಗಿ “ಕಾಂಗ್ರೆಸ್ ಪಕ್ಷವನ್ನು ದೇಶದಿಂದಲೇ ಕಿತ್ತೊಗೆಯಬೇಕು” ಎಂದು ನೀವು ಮಾಡಿದ ಭೀಷಣ ಭಾಷಣ ಯಾರಿಗಯ್ಯಾ ಭೂಷಣ? ಮಾತೃಪಕ್ಷವನ್ನೇ ಮುಗಿಸಲು ಹೊರಟಿರುವ ನೀವು ಯಾವ ಟೀಮು? ಎಂದು ಪ್ರಶ್ನೆ ಮಾಡಿದ್ದಾರೆ. ಸುಳ್ಳುರಾಮಯ್ಯ, ಈ ರಾಜ್ಯ ಕಂಡ ಅಪ್ರತಿಮ ಸುಳ್ಳುಗಾರ ನೀವು. ಆಶ್ರಯ ಕೊಟ್ಟ ಪಕ್ಷಕ್ಕೇ ಹಳ್ಳ ತೋಡುತ್ತಿರುವ ನೀವು ʼಬಿಜೆಪಿ ಬಾಲಂಗೋಚಿʼ & ʼಬಿಜೆಪಿಯ ಬೇನಾಮಿ ಆಸಾಮಿʼ ಎನ್ನುವುದು ಎಲ್ಲರಿಗೂ ಗೊತ್ತು ಎಂದಿರುವ ಅವರು, ಆಪರೇಷನ್ ಕಮಲಕ್ಕೆ ಸಹಕರಿಸಿದ್ದಕ್ಕೆ ಸಿಕ್ಕ ಪ್ರತಿಫಲವೆಷ್ಟು? ಆ ಪಾಪದ ಹಣವನ್ನು ಏನು ಮಾಡಿದಿರಿ? ಹ್ಯೂಬ್ಲೆಟ್ ವಾಚಿನ ʼಸಿದ್ದರಹಸ್ಯʼವೇನು? ಅರ್ಕಾವತಿ ರೀಡೂ ಬಗ್ಗೆ ಮೌನವೇಕೆ? ಧೈರ್ಯವಿದ್ದರೆ ಉತ್ತರಿಸಿ, ವಿಷಯಾಂತರ ಬೇಡ ಸರಣಿ ಪ್ರಶ್ನೆಗಳ ಮೂಲಕ ಕುಟುಕಿದ್ದಾರೆ.