ಬೆಂಗಳೂರು: ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಹಾಗೂ ರಾಜ್ಯ ಸರ್ಕಾರದ ಸಚಿವ ಜಮೀರ್ ಅಹ್ಮದ್ ನಡುವಿನ ವಾಕ್ಸಮರ ಬಗ್ಗೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ಕುಮಾರಸ್ವಾಮಿಯವರ ಮೈಬಣ್ಣದ ಬಗ್ಗೆ ಮಾತನಾಡಿದ ಜಮೀರ್ ಹೇಳಿಕೆಯನ್ನು ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿ.ಕೆ. ಶಿವಕುಮಾರ್ ಖಂಡಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿಕೆಶಿ, ಸಚಿವ ಜಮೀರ್ ಅವರು ಕುಮಾರಸ್ವಾಮಿ ಅವರ ಮೈಬಣ್ಣ ಬಗ್ಗೆ ಮಾತಾಡಿರುವುದು ತಪ್ಪು ಎಂದು ಹೇಳಿದ್ದಾರೆ.
ಕುಮಾರಸ್ವಾಮಿ-ಜಮೀರ್ ನಡುವೆ ವೈಯಕ್ತಿಕ ವಿಚಾರಗಳು ಏನೇ ಇದ್ದರೂ ಮೈಬಣ್ಣ ಬಗ್ಗೆ ಮಾತನಾಡುವುದು ಸರಿಯಲ್ಲ ಎಂದ ಡಿಕೆಶಿ, ಕೆಪಿಸಿಸಿ ಅಧ್ಯಕ್ಷನಾಗಿಯೂ ಜಮೀರ್ ಹೇಳಿಕೆಯನ್ನು ತಪ್ಪು ಎಂದು ಹೇಳುತ್ತಿದ್ದೇನೆ. ಅವರು ಕೊಚ್ಚೆ ಎಂದದ್ದು ಸರಿಯೋ, ಇವರು ಕರಿಯ ಎಂದದ್ದು ತಪ್ಪೋ ಎಂಬುದನ್ನು ಜನ ತೀರ್ಮಾನಿಸಲಿ ಎಂದೂ ಪ್ರತಿಪಾದಿಸಿದರು.